Audio available ಮಂಗಳೂರು ವಾಸ - ಹೈಸ್ಕೂಲು ವಿದ್ಯಾಭಾಸ Audio: ಮಂಗಳೂರು ವಾಸ - ಹೈಸ್ಕೂಲು ವಿದ್ಯಾಭಾಸ ೧೯೭೧-೧೯೭೪ ಎಲ್ಲ ವಿಚಾರ ಪರಾಮರ್ಶೆ ನಂತರ ೧೯೭೧ರ ಶಾಲಾ ದಾಖಲಾತಿಯ ಹೊತ್ತಿಗೆ ನಾವು ಮಂಗಳೂರಿಗೆ ಬಂದೆವು. ಒಂದು ಎತ್ತಿನ ಗಾಡಿಯ ಸಾಮಾನು ತಂದೆವು. ಕೆಲವೊಂದು ಸಾಮಾನುಗಳನ್ನು ಇನ್ನೂ ಗೊಂಡಬಾಳಿನಲ್ಲಿಯೇ ಇಟ್ಟು ಬಂದಿದ್ದೆವು. ಇಂತಹ ವಸ್ತುಗಳಲ್ಲಿ ನನಗೆ ನೆನಪಿಗೆ ಬರುವ ಹಾಗೆ ಹಳೆಯ ಚಂದಮಾಮ ಪುಸ್ತಕಗಳು , ಜೊತೆಗೆ ಬಹುಶಹ ಗೋರಖಪುರ ಪ್ರೆಸ್ಸಿನವರು ಪ್ರಕಟಿಸಿರಿಬಹುದಾದ ತುಂಬಾ ಆಕರ್ಷಕ ಬಣ್ಣದ ಚಿತ್ರಗಳೂ ಇದ್ದ ಭಾಗವತ , ರಾಮಾಯಣ , ಮಹಾಭಾರತಗಳ ಪುಸ್ತಕಗಳು . ಅವನ್ನು ನಮ್ಮ ಮನೆಯಲ್ಲಿ ಇದ್ದ ಕಟ್ಟಿಗೆಯ ಕಪಾಟಿನಲ್ಲಿ ಇಟ್ಟು ಬಂದಿದ್ದೆವು. ಸರಿಯಾಗಿ ಬಾಗಿಲು, ಬೀಗ ಹಾಕದ ಮನೆಗೆ ಶಾಲಾ ಮಕ್ಕಳು ನುಗ್ಗಿ ಪುಸ್ತಕಗಳಲ್ಲಿನ ಚಿತ್ರಗಳಿಂದ ಆಕರ್ಷಿತರಾಗಿ ಎಲ್ಲ ಚಲ್ಲಾಪಿಲ್ಲಿ ಮಾಡಿ ಹೋಗಿದ್ದರು. ಆ ಪುಸ್ತಕಗಳ ಜೊತೆಗೆ ಇತರ ಕೆಲ ಪುಸ್ತಕಗಳೂ ಮತ್ತು ತಂದೆ ಬರೆದಿಟ್ಟಿದ್ದ ನಮ್ಮ ಮನೆಯವರ ಎಲ್ಲ ಜಾತಕಗಳೂ ಕಳೆದುಹೋದವು. ಅಲ್ಲಿಗೆ ಅಂದಿನಿಂದ ನಮಗೆ ಜಾತಕಗಳಿಂದ ಮುಕ್ತಿಯೂ ಸಿಕ್ಕಿತು! ಟಿ ಬಿ ಕಾಯಿಲೆಯಿಂದ ಅಪ್ಪ ನಿತ್ರಾಣರಾಗಿ , ಅಸಹಾಯಕರಾಗಿ ನೆಲ ಹಿಡಿದಿದ್ದರು ಎಂದು ನ...