ಭಾಗ -೧ (ಯಾದ್ನ್ಯವಲ್ಕ್ಯ)
ಭಾಗ -೧
ಬಾಲ್ಯ
ನನ್ನ ಮತ್ತು ನಮ್ಮ ಊರು ಗೊಂಡಬಾಳು. ಈಗಿನ ಕೊಪ್ಪಳ ಜಿಲ್ಲೆಯ ಒಂದು ಗ್ರಾಮ .
ಅದು ಕೊಪ್ಪಳದಿಂದ ಸುಮಾರು ೧೦ ಕಿ ಮೀ ದೂರದಲ್ಲಿದೆ .ಸುಮಾರು ೧೫೦ ಮನೆಗಳ ಗ್ರಾಮ .ಉತ್ತರ ಕರ್ನಾಟಕದ ಎಲ್ಲ ಹಳ್ಳಿಗಳಂತೆ ಅತ್ಯಂತ ಹಿಂದುಳಿದ ಹಳ್ಳಿ. ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥರೇ ಇದ್ದ ಗೊಂಡಬಾಳಿನಲ್ಲಿ ಎಲ್ಲ ಜಾತಿ ಜನಾಂಗದವರೂ ಇದ್ದರು . ಮುಖ್ಯವಾಗಿ ಮತ್ತು ಪ್ರಧಾನ ಸ್ಥಾನದಲ್ಲಿ ಎಲ್ಲ ಉತ್ತರ ಕರ್ನಾಟಕದ ಹಳ್ಳಿಗಳಂತೆ ಲಿಂಗಾಯತರು ಇದ್ದರು. ನಂತರದ ಸ್ಥಾನದಲ್ಲಿ ಕುರುಬರು, ಆರ್ಯರು ಎಂದು ಕರೆಯುವ ಕೃಷಿ ಪ್ರಧಾನ ಉದ್ಯೋಗದ ಜನರೂ ಹಾಗು ಭೂರಹಿತ ಹರಿಜನರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು . ಉತರ ಕರ್ನಾಟಕದ ಗ್ರಾಮವಾದ್ದರಿಂದ ಬ್ರಿಟಿಷರಷ್ಟೆ ದೀರ್ಘಕಾಲ ಆಳಿದ ನಿಜಾಮರ ಪ್ರಭಾವದಿಂದಾಗಿ ಮುಸ್ಲಿಮರೂ ಸಾಕಷ್ಟು ಸಂಖ್ಯೆಲ್ಲಿದ್ದರು . ಕ್ರಿಶ್ಚಿಯನ್ನರಿದ್ದದ್ದು ನನ್ನ ನೆನಪಿಗೆ ಬರುತಿಲ್ಲ . ಬಹುಶಹ ಇರಲಿಲ್ಲವೇನೋ? ವೈಶ್ಯರ ಎರಡು ಮನೆಗಳೂ , ಬ್ರಾಹ್ಮಣರ ೨ ಮನೆಗಳೂ - ಇವುಗಳಲ್ಲಿ ನಮ್ಮದೊಂದು ಇದ್ದವು . ಇದೆಲ್ಲ ವಿವರ ೬೦ ರ ದಶಕದಲ್ಲಿದ್ದಂತೆ , ಹಾಗೂ ನನ್ನ ತಿಳುವಳಿಕೆಗೆ ಬಂದಿದ್ದಂತೆ .
ಹಾಗೆಯೇ ಇಲ್ಲಿ ಒಂದು ವಿಷಯ - ನಮ್ಮ ಊರು ಹಳೆಯ ಗೊಂಡಬಾಳು ಮಾತು ಹೊಸ ಗೊಂಡಬಾಳೆಂದು ಎಂದು ಹೋಳಾಗಿತ್ತು. ಕಾರಣ ತುಂಗಭದ್ರಾ ಡ್ಯಾಮ್ ನಿರ್ಮಾಣ . ಅದಕ್ಕೂ ಮೊದಲು ಅದು ಹಳ್ಳವಾಗಿ ಹರಿಯುತಿತ್ತು . ಅದು ನಮ್ಮ ಊರಿನ ಕಾವೇರಿಯಾಗಿ ನಮ್ಮ ಊರನ್ನು ಪಾವನಗೊಳಿಸಿತ್ತು. ಎಲ್ಲ ನದಿಗಳಂತೆ ಊರಿನ ನೂರಾರು ಕುಟುಂಬಗಳಿಗೆ ಆಸರೆ ನೀಡಿ ಬದುಕಲು ಅವಕಾಶ ನೀಡಿತ್ತು .ಆದರೆ ತುಂಗಭದ್ರಾ ಡ್ಯಾಮ್ ನಿರ್ಮಾಣದ ನಂತರ ಅದು ನಮ್ಮ ಊರನ್ನು ವಿಭಜಿಸಿತ್ತು. ಪ್ರತಿವರ್ಷವೂ ಅದು ನಮ್ಮ ಊರನ್ನು ೪-೫ ತಿಂಗಳ ಕಾಲ ನೀರಿನಲ್ಲಿ ಮುಳುಗಿಸುತಿತ್ತು. ಆಗ ಅದು ನಮ್ಮನ್ನೆಲ್ಲ ಸಂತರಸ್ತರ ತಾಪತ್ರಯಕ್ಕೆ ಮತ್ತು ಬವಣೆಗಳಿಗೆ ದೂಡುತಿತ್ತು .
ಈ ನನ್ನ ಊರು ೬೦ರ ದಶಕದ್ದು. ಯಾವುದೇ ವೈದ್ಯಕೀಯ ಸೌಕರ್ಯಗಳಿಲ್ಲದಿದ್ದ , ಸಾರಿಗೆ ಸಂಪರ್ಕವಿಲ್ಲದ ಹಾಗೂ ವಿದ್ಯುತ್ ಸಂಪರ್ಕವಿಲ್ಲದ ದ್ವೀಪದಂತಹ ಊರು. ದ್ವೀಪದಂತೆ ಎಂದರೆ ಸುತ್ತಲೂ ನೀರಿತ್ತು ಎಂದು ಭಾವಿಸಬೇಡಿ . ವರ್ಷದ ೧೨ ತಿಂಗಳೂ ಸಾರಿಗೆ ಸಂಪರ್ಕ ಇರುತ್ತಿರಲಿಲ್ಲ ಹಾಗೂ ೪ ತಿಂಗಳು ಊರಿನಲ್ಲಿ ಮೊಣಕಾಲು-ನಡು ಉದ್ದ ನೀರಿರುತ್ತಿತ್ತು. ಅಲ್ಲಿಂದ ಮುಂದೆ ಯಾವ ಊರಿಗೂ ರಸ್ತೆ ಸಂಪರ್ಕವಿರಲಿಲ್ಲ - ಆಧುನಿಕ ಪರಿಭಾಷೆಯಲ್ಲಿ ಹೇಳುವುದಾದರೆ ‘ಡೆಡ್ ಎಂಡ್’ ಗ್ರಾಮ. ಈ ಅರ್ಥದಲ್ಲಿ ಅದು ಒಂದು ದ್ವೀಪ ಗ್ರಾಮ .
ಇಷ್ಟೆಲ್ಲಾ ಅವಕಾಶವಂಚಿತ ಗೊಂಡಬಾಳಿನಲ್ಲಿ - ಎರಡೂ ಊರು ಸೇರಿ ೭ ನೆಯ ತರಗತಿಯವರೆಗೆ ಮಾತ್ರ ಶಾಲೆ ಇತ್ತು. ನನ್ನ ಕಾಲದ ಹೊತ್ತಿಗೆ ಸಣ್ಣ ಮಕ್ಕಳಿಗೆ ಅನುಕೂಲವಾಗಲಿ ಎಂದು ಹಳೆಯ ಗೊಂಡಬಾಳಿನಲ್ಲಿ ೧ , ೨ ನೆೇ ತರಗತಿಗಳು ಮಾತ್ರ . ಹೊಸ ಗೊಂಡಬಾಳಿನಲ್ಲಿ ಎಲ್ಲ ತರಗತಿಗಳು ನಡೆಯುತ್ತಿದ್ದವು . ಹೊಸ ಗೊಂಡಬಾಳು ಹಳೆಯ ಊರಿನಿಂದ ಅಂದಾಜು ೨ km ದೂರದಲ್ಲಿತ್ತು. ಶಾಲೆಗೆ ನಾವು ನಡೆದೇ ಹೋಗಬೇಕಾಗಿತ್ತು. ಅದರ ವಿವರಣೆ ನಂತರ ನೀಡುವೆ.
ದಾಖಲೆಗಳ ಪ್ರಕಾರ ನಾನು ಹುಟ್ಟಿದ್ದು ೧೯೫೮ರಲ್ಲಿ . ನಮ್ಮ ಕುಟುಂಬದಲ್ಲಿ ಬದುಕುಳಿದ ಎಂಟು ಮಕ್ಕಳಲ್ಲಿ ನಾನು ಎಂಟನೆಯವನು . ನನಗೆ ೩ ಅಕ್ಕಂದಿರೂ ೪ ಅಣ್ಣಂದಿರೂ ಇದ್ದಾರೆ. ಆದರೆ ಈಗ ಹಿರಿಯ ಅಣ್ಣ ಹಾಗೂ ಹಿರಿಯ ಅಕ್ಕ ಈಗ ಬದುಕಿಲ್ಲ . ಈ ಕಾರಣದಿಂದ ನನ್ನೆಲ್ಲ ನೆನಪುಗಳು ೧೯೬೫ ರ ನಂತರದವು . ನಮ್ಮ ತಂದೆ ಹುಟ್ಟಿದ್ದು ಬೇರೆ ಊರಾದರೂ - ನನ್ನೂರು ಅಂದು, ಇಂದು ಮತ್ತು ಎಂದೆಂದೂ ಗೊಂಡಬಾಳೆ . ಆ ಊರಿನ ಜೀವನ , ನೆನಪು ಹಾಗೂ ತಾಪತ್ರಯಗಳು ಇಂದು ನಾವಿರುವಂತೆ ನಮ್ಮನ್ನು ರೂಪಿಸಿದ್ದು . ಆದ್ದರಿಂದ ಊರಿಗೆ, ಊರಿನ ಜನಕ್ಕೆ ಹಾಗೂ ಪರಿಸ್ಥಿತಿಗೆ ನಮ್ಮ ಕೃತಜ್ಞೆತೆಗಳು ಸದಾಕಾಲ ಇರುತ್ತವೆ , ಇರಬೇಕಾದ್ದು ಸಹಜವೂ ಕೂಡ .
ನನ್ನ ಹುಟ್ಟಿಗೂ ಮೊದಲು ನಮ್ಮ ಕುಟುಂಬ ಗೊಂಡಬಾಳಿನಲ್ಲಿ ಅನೇಕ ದಶಕಗಳಿಂದ ಅಲ್ಲಿ ವಾಸವಿತ್ತು. ಎಷ್ಟು ಎಂದು ನನಗೆ ಸರಿಯಾಗಿ ತಿಳಿಯದು . ಅದು ನಮ್ಮ ಊರಾದರೂ ಅಲ್ಲಿ ನಮಗೆ ಸ್ವಂತ ಜಮೀನು , ಮನೆಯೂ ಇರಲಿಲ್ಲ. ಇದು ನಮ್ಮ ತಂದೆ ತಾಯಿ ವಾಸವಿದ್ದ ಕಾಲದುದ್ದಕ್ಕೂ ನಿಜ . ಹಾಗಿದ್ದರೂ ಅದು ನಮ್ಮ ಊರು ಅನ್ನ, ನೀರು, ವಿದ್ಯೆ ಕೊಟ್ಟು ಬದುಕಿಸಿದ ರೂಪಿಸಿದ ಊರು ನನ್ನೂರು . ಅಲ್ಲಿ ನಾನು ಇದ್ದದ್ದು ೧೯೫೮ರಿಂದ ೧೯೭೨ರವರೆಗೆ ಮಾತ್ರ . ನನ್ನ ನೆನಪುಗಳು ಅನೇಕ , ಹಾಗೂ ಅಪರೂಪದವು.
ನಮ್ಮದು ಹುಟ್ಟಿನಿಂದ ಬ್ರಾಹ್ಮಣರ ಕುಟುಂಬವಾದರೂ ಬಡ ಬ್ರಾಹ್ಮಣರದ್ದು ಎಂದರೆ
ಸರಿಯಾದೀತೇನೋ . ಎರಡೂ ಊರುಗಳು ಸೇರಿ ಒಟ್ಟು ಮೂರು ಬ್ರಾಹ್ಮಣರ ಮನೆಗಳಿದ್ದವು. ಅದರಲ್ಲಿ ನಮ್ಮದೊಂದು. ಇನ್ನೆರಡರಲ್ಲಿ ಒಂದು ಕುಟುಂಬ ಶಾನುಭೋಗರದ್ದು ಇನ್ನೊಂದು ಹೊಸಊರಿನಲ್ಲಿ ಇದ್ದ ದೇಶಪಾಂಡೆ ಕುಟುಂಬ .ದೇಶಪಾಂಡೆ ಕುಟುಂಬ ಆರ್ಥಿಕವಾಗಿಯೂ , ಸಾಮಾಜಿಕವಾಗಿಯೂ ಸುಸ್ಥಿತಿಯಲ್ಲಿತ್ತು .ಅವರು ಪೋಸ್ಟ್ ಮಾಸ್ಟರ್ ಕೂಡ ಆಗಿದ್ದರು. ಹಳೆಯ ಊರಿನಲ್ಲಿ ಇದ್ದ ಶಾನುಭೋಗರ ಕುಟುಂಬ ಆಗಲೇ ಹಳ್ಳ ಹಿಡಿದಿತ್ತು. ಹೆಂಡತಿ ಸತ್ತಿದ್ದಕ್ಕಾಗಿಯೋ ಅಥವಾ ಇನ್ನಾವ ಕಾರಣಕ್ಕಾಗಿಯೋ ನನಗೆ ಸರಿಯಾಗಿ ತಿಳಿಯದು , ಮನೆಯ ಹಿರಿಯ ಪ್ರತಿದಿನ ಸಂಜೆ ಕುಡಿದು ಕೂಗಾಡುತ್ತಿದ್ದರು. ದಿನವೂ ನೋಡಿ ನೋಡಿ ಅಭ್ಯಾಸವಾಗಿದ್ದ ಜನರಿಗೆ ಹಾಗು ನಮಗೆ ಕೆಲ ದಿನಗಳ ನಂತರ ಅದೆಲ್ಲ ಸಹಜವೆನಿಸುತ್ತಿತ್ತು.
ನನಗೆ ನೆನಪಿರುವಂತೆ ೧೯೬೫ರಲ್ಲಿ ನಾನು ಶಾಲೆಗೆ ಹೋಗಲು ಆರಂಭಿಸಿದೆ. ನಾನು ಕೊನೆಯ ಮಗನಾದ್ದರಿಂದಲೂ , ಬಡತನದ ಕಾರಣಗಳಿಂದಾಗಿಯೂ ಅದೇನೂ ಸಂಭ್ರಮದ ಸಂಗತಿಯಾಗಿರಲಿಲ್ಲ . ಒಂದನೆಯ ತರಗತಿಯ ನೆನಪುಗಳು ನನ್ನ ಜ್ಞಾಪಕಕ್ಕೆ ಬರುತ್ತಿಲ್ಲ .ಆದರೆ ೧ ಹಾಗೂ ೨ನೆಯ ತರಗತಿಯನ್ನು ನಾನು ಹಳೆಯ ಗೊಂಡಬಾಳಿನಲ್ಲಿ ಮುಗಿಸಿದೆ. ಊರು ನೀರಿನಲ್ಲಿ ಮುಳುಗುತ್ತಿದ್ದರೂ ಭಾವನಾತ್ಮಕ ಕಾರಣಗಳಿಂದಾಗಿ ನಮ್ಮನ್ನೂ ಸೇರಿದಂತೆ ಊರಿನ ಜನ ಸರಕಾರದವರು ಜಾಗ ಮತ್ತು ಕಟ್ಟಡ ಸಾಮಗ್ರಿ ಕೊಟ್ಟಿದ್ದರೂ ಹಳೆಯ ಊರು ಬಿಡಲು ತಯಾರಿರಲಿಲ್ಲ . ಸರಕಾರದ ವಿರುದ್ಧ ಯಾವದೇ ಪ್ರತಿಭಟನೆ ಇದಕ್ಕೆ ಕಾರಣವಲ್ಲ. ಬಾಳಿ ಬದುಕಿದ ಹಾಗೂ ಬದುಕಿಗೆ ಆಸರೆ ನೀಡಿದ ಊರು ತೊರೆಯುವದು ಸಾಮಾನ್ಯವಲ್ಲ. ಇಂಥಹುದೇ ಕಾರಣಕ್ಕಾಗಿ ಕೆಲವರು ಹಳೆಯ ಊರಿನಲ್ಲೂ ; ಕೆಲವರು ಹೊಸ ಊರಿನಲ್ಲೂ ವಾಸವಿದ್ದರು.
ಹಳೆಯ ಊರಿನ ನನ್ನ ಶಾಲೆ ಎಂದರೆ ಆಗ ಇದ್ದ ಮತ್ತು ಈಗಲೂ ಇರುವ ಹನುಮಂತ ದೇವರ ಗುಡಿ . ಈ ಗುಡಿಯ ಪೌಳಿಯ ಕಟ್ಟೆಯೇ ನನ್ನ ಶಾಲಾ ಕೊಠಡಿ . ಅದು ನಾವು ಆಗ ಇದ್ದ ಮನೆಯಿಂದ ೨೫೦ ಮೀ ದೂರ. ನಮಗೆ ಯಾವದೇ ಸ್ವಂತ ಮನೆಯಿರಲಿಲ್ಲವಾದ್ದರಿಂದ ನಾವು ಆಗಾಗ ಮನೆ ಬದಲಾಯಿಸಬೇಕಾಗಿತ್ತು. ನನಗೆ ನೆನಪಿರುವಂತೆ ನಾವು ಒಟ್ಟು ನಾಲ್ಕು ಮನೆಗಳಲ್ಲಿ ವಾಸವಿದ್ದೆವು.
ನಾನಾಗಲೇ ಹೇಳಿದ್ದೇನೆ . ನಮ್ಮದು ನಿಜಾಮರ ಆಡಳಿತಕ್ಕೊಳಪಟ್ಟಿದ್ದ ಪ್ರದೇಶವೆಂದು . ಈ ಕಾರಣಕ್ಕಾಗಿ ಬ್ರಾಹ್ಮಣರಂತೆ ಮುಸ್ಲಿಮ್ಮರೂ ವಿದ್ಯೆ ಹಾಗೂ ಅಧಿಕಾರ ಕೇಂದ್ರಗಳ ವಾರಸುದಾರರಾಗಿದ್ದರು. ನನ್ನ ಆರಂಭಿಕ ಶಿಕ್ಷಕರು - ಹುಸೇನಸಾಬ್ ಮಾಸ್ತರರು . ನನ್ನ ಇಂದಿನ ಕನ್ನಡ ಕಲಿಕೆಗೆ ನಮ್ಮ ಕುಟುಂಬದ ಹಿನ್ನೆಲೆಯ ಜೊತೆಗೆ ಅವರ ಪಾತ್ರವೂ ಇದೆ. ನಾಲ್ಕಕ್ಷರ ಕಲಿಸಿದವರೂ ಗುರು ತಾನೇ! ಅದೂ ಮೊದಲ ಅಕ್ಷರ . ಅವರಿಗೊಂದು ದೊಡ್ಡ ಸಲಾಂ.
ವಿಪರ್ಯಾಸ ನೋಡಿ .ಶಾಲೆ ನಡೆಯುತ್ತಿದ್ದದ್ದು ಹನುಮಂತ ದೇವರ ಗುಡಿಯ ಪೌಳಿಯ ಕಟ್ಟೆಯ ಮೇಲೆ. ಶಿಕ್ಷಕರು ಮುಸ್ಲಿಮರು. ೧ ಮತ್ತು ೨ ನೆಯ ತರಗತಿಗಳು ಒಟ್ಟಿಗೇ ಒಂದೇ ಕಟ್ಟೆಯ ಮೇಲೆ . ಶಿಕ್ಷಕರೂ ಒಬ್ಬರೇ . ಆಗ ನಮ್ಮ ಕಲಿಕೆಯೆಂದರೆ ಎಲ್ಲ ಕನ್ನಡ ಶಾಲೆಗಳಂತೆ ಕನ್ನಡ ಕಾಗುಣಿತ ಬರೆಯುವದು ಮತ್ತು ಮಗ್ಗಿ ಬಾಯಿಪಾಠ ಮಾಡುವದು. ದೇವಸ್ಥಾನದ ಪೌಳಿಯ ಕಟ್ಟೆಯ ಮೇಲೆ ಕೈಯ್ಯಲ್ಲಿ ಒಂದು ಹೊನ್ನಂಬರಿಕೆ ಬರಲು ಹಿಡಿದು ಕುರ್ಚಿಯ ಮೇಲೆ ಅವರು ಕುಳಿತಿರುತ್ತಿದ್ದರು . ಮಕ್ಕಳಾದ ನಾವು ಕೆಳಗೆ ಮರಳು-ಮಣ್ಣಿನ ನೆಲದ ಮೇಲೆ. ೧ ಹಾಗೂ ೨ ಸೇರಿ ನಾವು ಒಟ್ಟು ೨೦-೨೫ ಮಕ್ಕಳಿದ್ದ ನೆನಪು. .
ಮನೆಯ ವಾತಾವರಣದಿಂದಾಗಿ ಶಾಲೆಗೆ ಹೋಗುವುದು ಕನ್ನಡ ಮತ್ತು ಮಗ್ಗಿ ಕಲಿಯುವುದು - ಇದ್ದದ್ದು ಎರಡೇ ತಾನೇ! , ನನಗೆ ಕಷ್ಟವೇನೂ ಆಗಲಿಲ್ಲ. ಕುರುಡುಗಣ್ಣಲ್ಲಿ ಮೆಳ್ಳೆಗಣ್ಣು ವಾಸಿ ಎನ್ನುವ ಹಾಗೆ , ಶಿಕ್ಷಕರ ದೃಷ್ಟಿಯಲ್ಲಿ ನಾನು ವಿಶೇಷ ತೊಂದರೆಯಿಲ್ಲದೆ ಗಮನ ಕೊಡಬೇಕಾದ ಹುಡುಗನಾಗಿರಲಿಲ್ಲ. ನಾನು ಎರಡನೇ ತರಗತಿಗೆ ಬಂದಾಗ ಇನ್ನಿಬ್ಬರು ಜಾಣ ಹುಡುಗರ ಜೊತೆ ಶಿಕ್ಷಕರು ನನಗೆ ಒಂದು ವಿಶೇಷ ಕೆಲಸ ನೀಡಿದ್ದರು. ಅದರಲ್ಲಿ ಒಂದು - ಶಾಲೆಗೆ ಬರದೇ ಇದ್ದ ಮಕ್ಕಳನ್ನು ಅವರವರ ಮನೆಗಳಿಗೆ ಹೋಗಿ ಕರೆತರುವುದು , ಇನ್ನೊಂದು ಬೇರೆ ಮಕ್ಕಳು ಬರೆದ ಕಾಗುಣಿತವನ್ನು ಪರಿಶೀಲಿಸುವುದು ಹಾಗೂ ಅವರಿಗೆ ಮಗ್ಗಿ ಹೇಳಿಸುವುದು. ನಮ್ಮ ಶಿಕ್ಷಕರಾದ ಹುಸೇನ್ ಸಾಬರು ದೊಗಳೆ ಪೈಜಾಮ ಹಾಕುತ್ತಿದ್ದರಿಂದ ಅವರನ್ನು ನಾವು “ಹರಿನಾಳಿಗೆ” ಮಾಸ್ತರು ಎಂದು ಕರೆಯುತ್ತಿದ್ದೆವು - ಅವರು ಕಡು ಬೇಸುಗೆಯಲ್ಲಿ ಬೇವಿನ ಮರದ ಕೆಳಗೆ ಸೊಂಪಾಗಿ ನಿದ್ದೆಗೆ ಜಾರುತ್ತಿದ್ದರು. ಈ ನಡುವೆ ಹನುಮಂತ ದೇವರ ಗುಡಿಗೆ ದೀಪ ಬೆಳಗಿಸಲು ಬರುತ್ತಿದ್ದ ಭಕ್ತರ ಗಂಟೆಯ ಶಬ್ದ , ಪಕ್ಕದಲ್ಲೇ ಬಾವಿಯ ನೀರು ಸೇದುತ್ತಿದ್ದ ಮಹಿಳೆಯರ ಮಾತಿನ ಕಲರವ ಹಾಗೆಯೇ ಹೊಲಕ್ಕೆ ದನಕರುಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ರೈತಾಪಿ ಜನರು . ನಮ್ಮ ಶಾಲಾ ಜೀವನಕ್ಕೆ ( ೧ ಮತ್ತು ೨ ತರಗತಿಗಳಿಗೆ ) ಕೊಠಡಿಗಳೂ , ಕಪ್ಪು ಹಲಗೆಗಳು ಮತ್ತು ಚಾಕ್ ಪೀಸುಗಳ ಅವಶ್ಯಕತೆ ಶಿಕ್ಷಕರಿಗೂ ಇರಲಿಲ್ಲ ಅವು ಇರಬೇಕು ಎಂದು ನಮಗೂ ತಿಳಿದಿರಲಿಲ್ಲ
ಕೆಲವು ವರ್ಷಗಳ ಕಾಲ ನಮ್ಮ ತಂದೆಯೂ ಇದೇ ಹನುಮಂತ ದೇವರ ಪೂಜಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ನಂತರ ನಾನೂ ಕೂಡ ಅವರೊಡನೆ ಕೆಲಕಾಲ ದೇವರ ಪೂಜೆ ಸಲ್ಲಿಸಿದೆ . ನಮ್ಮ ಗೊಂಡಬಾಳ ವಾಸದ ಕೊನೆಯ ಕಾಲದಲ್ಲಿ ಈ ದೇವಸ್ಥಾನ ನನ್ನ ಸ್ಮೃತಿಪಟಲದಲ್ಲಿ ಆಚೊತ್ತಿ ಉಳಿಸಿದ ಘಟನೆಯ ಬಗೆಗೆ ನಂತರ ಬರೆಯುವೆ. ಆಮೇಲೆ ನಾನು ೭ನೆಯ ತರಗತಿಯಲ್ಲಿ ಓದುತ್ತಿದ್ದಾಗ ನನ್ನ ಉಪನಯನವೂ ಇದೇ ದೇವಸ್ಥಾನದಲ್ಲಿ ನಡೆಯಿತು. ನಮ್ಮ ಮನೆಯ ಸಂಪ್ರದಾಯದಂತೆ ನಾವು ನಾವೇ ಉಪನಯನ ಮಾಡಿಕೊಳ್ಳುವಂತಿರಲಿಲ್ಲವಂತೆ . ಹಾಗಾಗಿ ನಮ್ಮ ಅಣ್ಣಂದಿರ ಉಪನಯನವನ್ನು ಬೇರೆ ಯಾರದೋ ಮನೆಯ ಮದುವೆಯ ಸಂದರ್ಭದಲ್ಲಿ ಮಾಡಿದ್ದುಂಟು. ಆದರೆ ನನ್ನ ಸರದಿ ಬಂದಾಗ ಕಾಲ ಬದಲಾಗುತ್ತಿದ್ದು ಬೇರೆಯವರ ಮನೆಯಲ್ಲಿ ಮಾಡಿ ಕೊಡಲು ಯಾರೂ ಒಪ್ಪದ್ದಿದ್ದರಿಂದ ಕೊನೆಗೆ ಇದೇ ದೇವರ ಗುಡಿಯಲ್ಲಿ ಅನಿವಾರ್ಯವಾಗಿ ಸ್ವಂತ ಖರ್ಚಿನಲ್ಲಿ ಮಾಡಬೇಕಾಗಿ ಬಂತು.
ನನ್ನ ಕಾಲಕ್ಕೆ ಅಂದರೆ ೬೫-೭೧ ರ ಕಾಲಾವಧಿಯ ಹೊತ್ತಿಗೆ ಅಪ್ಪನಿಗೆ ಶಾರೀರಕವಾಗಿಯೂ , ಮಾನಸಿಕವಾಗಿಯೂ ಇಳಿ ವಯಸ್ಸಿನ ಕಾಲ. ನನಗೆ ತಿಳಿದಂತೆ ಆದಾಯವೂ ತೀರಾ ಪಾತಾಳಕ್ಕಿಳಿದಿತ್ತು . ಜಮೀನು ಮನೆಯಿಲ್ಲದೆ , ಹಿರಿಯ ಮಗನ ಆಸರೆಯಿಲ್ಲದೆ ಬಾಳು ತುಂಬ ಕಷ್ಟದಿಂದ ನಡೆದು ಹೋಗುತ್ತಿದ್ದ ಕಾಲ .ಹಾಗಾಗಿ ಎಲ್ಲ ಉಸ್ತುವಾರಿ ವಹಿಸಿ ಜವಾಬ್ದಾರಿ ತೆಗೆದುಕೊಳ್ಳುವ ಕಾಲ ಅವ್ವನದಾಗಿತ್ತು . ನನ್ನ ಬುದ್ಧಿ ಬಂದಾಗಿನಿಂದ ಅವರೇ ಎಲ್ಲ ನೇತೃತ್ವ ವಹಿಸುತ್ತಿದ್ದರು.
ನಮ್ಮ ತಂದೆ ಅವರ ಬಾಲ್ಯದಲ್ಲಿ ಧಾರವಾಡದಲ್ಲಿ ವೈದಿಕ ವಿದ್ಯೆ ಕಲಿತಿದ್ದರು. ವಿದ್ಯಾ ಸಂಪನ್ನರೂ, ಸಂಸ್ಕೃತ ಕಲಿತವರೂ ಆಗಿದ್ದರು. ಆದರೆ ನಮ್ಮ ತಾಯಿ ಮಾತ್ರ ಜೀವನದ ಕೊನೆಯವರೆಗೂ ಅನಕ್ಷರಸ್ಥರಾಗಿದ್ದರು . ಇದೊಂದು ವಿಪರ್ಯಾಸವೇ ಸರಿ. ತಾಯಿಯೂ ಪ್ರಯತ್ನಿಸಲಿಲ್ಲ , ತಂದೆಯೂ ಬಯಸಲಿಲ್ಲ , ನಾವೂ ಪ್ರಭಾವ ಬೀರಲಿಲ್ಲ ! ಅನಕ್ಷರಸ್ಥೆಯಾದರೂ ನಮ್ಮ ತಾಯಿ ಬುದ್ದಿವಂತೆಯಾಗಿದ್ದಳು , ವ್ಯಾವಹಾರಿಕ ಜಾಣ್ಮೆ ಇತ್ತು. ಆದ್ದರಿಂದ ನಮ್ಮ ತಂದೆಯ ಇಳಿ ವಯಸ್ಸಿನಲ್ಲಿ ಕುಟುಂಬ ಹಣಕಾಸು , ವ್ಯವಹಾರ ನಿರ್ವಹಿಸುವುದು ಅವರಿಗೆ ಕಷ್ಟವೇನೂ ಆಗಲಿಲ್ಲ. ಅಷ್ಟೇ ಅಲ್ಲ ನನಗೆ ತಿಳಿದಂತೆ ಅತ್ಯಂತ ಆತ್ಮ ವಿಶ್ವಾಸದಿಂದ ನಿರ್ವಹಿಸಿದರು!
ಹೊಸ ಗೊಂಡಬಾಳಿನಲ್ಲಿ ಶಾಲಾಜೀವನ
ನಾನಾಗಲೇ ಹೇಳಿರುವಂತೆ ೩ನೆಯ ತರಗತಿಯಿಂದ ನಾನು ಹೊಸ ಗೊಂಡಬಾಳಿನ ಸರಕಾರೀ
ಶಾಲೆಗೆ ಹೋಗಬೇಕಾಯ್ತು . ಅದು ೨ ಕಿ ಮೀ ದೂರದ ಊರು. ನಮಗೆ ಅದೇನೂ ಕಷ್ಟವೆನಿಸುತ್ತಿರಲಿಲ್ಲ , ಯಾಕೆಂದರೆ ನನ್ನ ಎಲ್ಲ ಅಣ್ಣಂದಿರೂ, ಇತರೆ ಹುಡುಗರೂ ಅಲ್ಲಿಗೇ ಹೋಗುತ್ತಿದ್ದರು. ಎಲ್ಲರೂ ನಡೆದೇ ಹೋಗುತ್ತಿದ್ದೆವು - ಆದರೆ ಜೊತೆಗೂಡಿಯಲ್ಲ-ನಮ್ಮ ನಮ್ಮ ಸ್ನೇಹಿತರ ಜೊತೆಗೆ. ಒಂದೆರಡು ಪುಸ್ತಕಗಳು , ಪದೇ ಪದೇ ನನ್ನ ಮೂಗಿನಂತೆಯೇ ಸೋರುತ್ತಿದ್ದ ಒಂದು ಪೆನ್ನು, “ನಿಬ್ಬು” ಎಂದು ನಾವು ಹೇಳುತ್ತಿದ್ದ ಅದರ ನಾಲಗೆ ಆಗಾಗ ಮುರಿಯುತ್ತಿತ್ತು. ಈಗಿನ ಮಕ್ಕಳ ಕೈಯಲ್ಲಿ ಇರುವ ಥರಹೇವಾರಿ ಪೆನ್ನುಗಳನ್ನು ನೋಡಿದಾಗ ನನಗೆ ನನ್ನ ಅದೇ ಸೋರುವ ಪೆನ್ನು ಜ್ಞಾಪಕಕ್ಕೆ ಬರುತ್ತದೆ .
ಅಲ್ಲಿ ಶಾಲೆ ಮೂರು ಕಟ್ಟಡಗಳಲ್ಲಿ ನಡೆಯುತ್ತಿತ್ತು. ೫, ೬, ೭ನೆಯ ತರಗತಿಗಳಿಗೆ ಬೇರೆ ಬೇರೆ ಕೊಠಡಿಗಳಿದ್ದವು. ಅಲ್ಲಿಯೂ ಹುಸೇನ್ನ್ ಸಾಬ್ ಎಂಬ ಹೆಸರಿನ ಇನ್ನೊಬ್ಬ ಶಿಕ್ಷಕರಿದ್ದರು. ಆದರೆ ಅವರು ನಮಗೆ ಗಣಿತ ಕಲಿಸುತ್ತಿದ್ದರು . ಅಲ್ಲಿ ನಾನು ೫ನೆಯ ತರಗತಿಯಿಂದ ಇಂಗ್ಲಿಷನ್ನೂ - ಅಂದರೆ ೨೬ ಅಕ್ಷರಗಳನ್ನೂ , ಕೆಲವೊಂದು ಪದಗಳನ್ನೂ ಕಲಿತೆ . ಆಗ ಅದೇ ಬೇಕಾದಷ್ಟಾಗಿತ್ತು. ಆದರೆ ೬ನೆಯ ತರಗತಿಯಿಂದ ಹಿಂದಿ ಭಾಷೆ ಕಲಿಯಬೇಕಾಗಿತ್ತು. ಅದೇನೋ ಕಾಣೆ ಹಿಂದಿ ಕಲಿಯುವುದು ನನಗೆ ಹೊರೆ, ಕಷ್ಟ ಎಂದೆನಿಸಿತು. ಆದ್ದರಿಂದ ಆ ತರಗತಿ ಬಂದಾಗ ಬೇಕೆಂದೇ ನೀರು ಕುಡಿಯುವ , ‘ಒಂದಕ್ಕೆ’ ಹೋಗುವ ನೆಪ ಒಡ್ಡಿ ತಪ್ಪಿಸಿಕೊಳ್ಳುತ್ತಿದ್ದೆ. ಆದರೆ ಕಳ್ಳ ಎಂದಾದರೊಂದು ದಿನ ಸಿಕ್ಕಿಬೀಳದೇ ಇರುವನೇ? ಆ ದುರ್ದಿನವೂ ಬೇಗನೇ ಬಂತು. ಹೇಳಿ ಕೊಟ್ಟಿದ್ದ ಪಾಠ ಓದಲು ಹೇಳಿದರು. ಓದಲಾಗಲಿಲ್ಲ . ಹೊನ್ನಂಬರಿಕೆ ಬರಲಿನ ಏಟು ತಪ್ಪಲಿಲ್ಲ. ಇದನ್ನು ನೋಡಿ ಸಹಪಾಠಿಗಳು ನಗುತ್ತಿದ್ದರು. ಅದರಿಂದ ನನಗೆ ಇನ್ನಷ್ಟು ನೋವಾಯಿತು . ಅವಮಾನವಾಯಿತು. ನಂತರವೂ ನಾನು ಇಂಗ್ಲೀಷು ಹಿಂದಿ ಕಲಿತದ್ದು ಅಷ್ಟಕ್ಕಷ್ಟೇ. ಇದೇ ಶಿಕ್ಷಕರು ಅವರ ಹೆಸರು ರಾಮಚಂದ್ರರಾವ್ ಎಂದು, ಇವರು ಮುಂದೆ ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿ ಬಹಳ ಕಾಲ ನಮ್ಮ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದರು. ಅಂತೂ ೧೯೭೨ರಲ್ಲಿ ನಾನು ೭ನೆಯ ತರಗತಿ ಪಾಸಾದೆ. ಪಬ್ಲಿಕ್ ಪರೀಕ್ಷೆಯನ್ನು ಬಿಸಿಲಹಳ್ಳಿಗೆ ಹೋಗಿ ಬರೆದೆ.
ಬಿಸಿಲಹಳ್ಳಿ ನಮ್ಮ ಊರಿನಿಂದ ಸರಿಸುಮಾರು ೧೫ ಕಿಮಿ ದೂರದ ಊರು. ಆಗ ಓದುವುದು , ಓದಿಸುವುದು ಕಷ್ಟವಾಗಿರಲಿಲ್ಲ . ಆದರೆ ೫-೬ ದಿನ ನಡೆಯಬಹುದಿದ್ದ ಆ ಪರೀಕ್ಷೆಗೆ ಆ ಊರಿಗೆ ಹೇಗೆ ಹೋಗುವುದು ,ಎಲ್ಲಿ ಇರುವುದು: ಊಟ , ವಸತಿಯ ಸಮಸ್ಯೆ ಇತ್ಯಾದಿಗಳೆ ದೂಡ್ಡ ವಿಷಯವಾಗಿತ್ತು. . ನಮ್ಮ ಊರಿನ ಹೆಚ್ಚಿನ ಮಕ್ಕಳ ಸಮಸ್ಯೆ ಇದೇ ಆಗಿತ್ತು. ನಮ್ಮ ಅಣ್ಣಂದಿರ ಸರದಿ ಬಂದಾಗ ಹೇಗೆ ನಿಭಾಯಿಸಿದ್ದರೋ ನನಗೆ ತಿಳಿಯದು . ಆದರೆ ನನ್ನ ಸರದಿ ಬಂದಾಗ ತಂದೆ ತಾಯಿಗಳಿಗೆ ಇದೊಂದು ದೊಡ್ಡ ಸಮಸ್ಯೆಯಾಗಿತ್ತು .
ದೀರ್ಘಕಾಲದ ಚರ್ಚೆ; ಸಮಾಲೋಚನೆ ಹಾಗೂ ಪರಾಮರ್ಶೆಯ ನಂತರ ಎತ್ತಿನ ಗಾಡಿಯಲ್ಲಿ ಇತರೆ ಮಕ್ಕಳ ಜೊತೆ ಹೋಗಿ ಅಪ್ಪನಿಗೆ ಪರಿಚಯವಿದ್ದ ಬ್ರಾಹ್ಮಣರ ಮನೆಯಲ್ಲಿ ಇದ್ದು ಪರೀಕ್ಷೆ ಬರೆಯುವದೆಂದು ತೀರ್ಮಾನಿಸಲಾಯಿತು . ಆ ಕುಟುಂಬಕ್ಕೆ ಹೇಗೋ ಹೊಂದಿಸಿ ೧೦ ರೂಪಾಯಿ ಕೊಡುವದೆಂದೂ ಅಂದುಕೊಂಡರು . ಹೀಗೆ ೭ನೆಯ ತರಗತಿಯ ಪರೀಕ್ಷೆ ಬರೆದದ್ದಾಯಿತು. ಉತ್ತೀರ್ಣನೂ ಆದೆ. ಆದರೆ ಎಷ್ಟು ಅಂಕಗಳು ಬಂದಿದ್ದವು ಎಂದು ನನಗೆ ಈಗ ನೆನಪಿಲ್ಲ.
ಶಾಲಾಜೀವನ - ಇತರ ಘಟನೆಗಳು
ಬಾಲ್ಯ ಯಾರಿಗೇ ಆಗಲಿ ಅತ್ಯಂತ ಮುಖ್ಯ ಘಟ್ಟವೇ . ನನ್ನದೇನೂ ಭಿನ್ನವಲ್ಲ . ನನ್ನ ಬಾಲ್ಯದ ಹೊತ್ತಿಗೆ ಮನೆಯಲ್ಲಿ ಇದ್ದದ್ದು ಇಬ್ಬರು ಅಣ್ಣಂದಿರು , ಒಬ್ಬ ಅಕ್ಕ ಹಾಗೂ ಅಪ್ಪ , ಅವ್ವ ಮತ್ತು ನಾನು.ಬಡತನದ ಛಾಯೆ . ಜೋಳದ ರೊಟ್ಟಿ, ಮೊಸರು ಗುರೆಳ್ಳು ಪುಡಿ , ನಮ್ಮ ದಿನ ನಿತ್ಯದ ಆಹಾರ . ಶಾಲೆಯಲ್ಲಿ ಆಗಲೇ ಮದ್ಯಾಹ್ನದ ಹೊತ್ತು ಉಪ್ಪಿಟ್ಟು ಕೊಡುವ ವ್ಯವಸ್ಥೆ ಜಾರಿಯಲ್ಲಿತ್ತು. ಕೆಲ ಕಾಲ ನಾವು ಉಪ್ಪಿಟ್ಟು ಸೇವಿಸೆದೆವು . ಅದನ್ನು ತಯಾರಿಸುವ ಕೆಲಸವನ್ನು ಮಾಡಿದೆವು. ದೊಡ್ಡ ದೊಡ್ಡ ಅಲ್ಯೂಮಿನಿಯಂ ಪಾತ್ರೆಯಲ್ಲಿ ಉಪ್ಪಿಟ್ಟು ಸಿದ್ಧಪಡಿಸುತ್ತಿದ್ದೆವು. ಅಂತಹ ದಿನಗಳಲ್ಲಿ ನಮ್ಮ ಅಂದಿನ ಕಲಿಕೆ ಅದೇ ಆಗಿರುತ್ತಿತ್ತು.ನಂತರ ಎಲ್ಲರನ್ನೂ ಸಾಲಾಗಿ ಕೂರಿಸಿ “ಸಹನಾಭವತು ....” ಹೇಳಿಸಿ ಉಪ್ಪಿಟ್ಟು ಕೊಡುತ್ತಿದ್ದರು . ಅನೇಕ ದಿನಗಳು ಹೀಗೆ ಉರುಳಿದವು.
ಉಪ್ಪಿಟ್ಟು ಅಮೇರಿಕಾದ ಮೆಕ್ಕೆ ಜೋಳದ್ದು . ಯುದ್ಧಕಾಲದ ಆ ಸಂದರ್ಭದಲ್ಲಿ ಅದರಲ್ಲಿ ಸಾಕಷ್ಟು ಹುಳುಗಳಿರುತ್ತಿದ್ದವು .ಆದ್ದರಿಂದ ಕೆಲ ಕಾಲದ ನಂತರ ನಾವು ಕೆಲ ಹುಡುಗರು ಅದನ್ನು ತಿನ್ನುವುದನ್ನು ಬಿಟ್ಟೆವು. ಆಮೇಲೆ ನಾವು ಅಲ್ಯೂಮಿನಿಯಂ ಟಿಫನ್ ಬಾಕ್ಸಿನಲ್ಲಿ ಜೋಳದ ರೊಟ್ಟಿ , ಮೊಸರು ಹಾಗು ಗುರೆಳ್ಳುಪುಡಿ ಜೊತೆಗೆ ನಮ್ಮ ಪರಮ ವ್ಯಂಜನ - ಹುಣಸೆ ತೊಕ್ಕು! ಆಗ ನಮ್ಮ ಮನೆಯಲ್ಲಿ ಮಾವಿನಕಾಯಿ ತೊಕ್ಕು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುತ್ತಿದ್ದರು- ಹಾಗೆಂದು ನೆನಪು. ಅಕ್ಕಿಯ ಅನ್ನವಂತೂ ತುಂಬ ಅಪರೂಪ - ಅದು ಶ್ರೀಮಂತರ ಆಹಾರವಾಗಿತ್ತು. ನಮ್ಮ ಮನೆಯಲ್ಲಿ ಹಬ್ಬ ಹರಿದಿನಗಳಲ್ಲಿ ಇಲ್ಲವೇ ಬರೀ ಮೇಲೂಟಕ್ಕೆ ಅಂತ ಸ್ವಲ್ಪ ಅನ್ನ ಮಾಡುತ್ತಿದ್ದ ನೆನಪು, ಅಂದರೆ ರೊಟ್ಟಿ ಊಟದ ನಂತರ ರುಚಿಗಾಗಿ ಮಾತ್ರ.
ನಮ್ಮ ಶಾಲಾಜೀವನದ ಕಾಲಾವಧಿಯಲ್ಲಿ ನೀರಿನ ಸಮಸ್ಯೆ ತುಂಬಾ . ಬಾವಿಗಳೆಲ್ಲ ಬತ್ತುತ್ತಿದ್ದವು. ಅದರಲ್ಲೂ ಕುಡಿಯುವ ನೀರಿನ ಸಮಸ್ಯೆ ತುಂಬಾ ಇತ್ತು. ಕುಡಿಯುವ. ನೀರಿಗಾಗಿ ನಾವೇ ಹುರಿ-ದಾರದ ಸಹಾಯದಿಂದ ಅಂದರೆ ಅದಕ್ಕೆ ಟಿಫನ್ ಕ್ಯಾರಿಯರ್ ಕಟ್ಟಿ ನೀರು ಸೇದುತ್ತಿದ್ದೆವು. ಅದು ನಮಗೆ ಸಾಹಸಮಯವೂ, ಮನೋರಂಜಕವೂ ಆದ ಚಟುವಟಿಕೆ ಆಗಿತ್ತು. ಅಪರೂಪಕ್ಕೊಮ್ಮೆ ದಾರದ ಸಮೇತ ಟಿಫನ್ ಕ್ಯಾರಿಯರ್ ಬಾವಿಗೆ ಬೀಳುತ್ತಿತ್ತು. ಆಳವಾದ ಬಾವಿಗಳಾದ್ದರಿಂದ ನಾವು ಅದನ್ನು ತೆಗೆಯುವ ಸಾಹಸಕ್ಕೆ ಇಳಿಯುತ್ತಿರಲಿಲ್ಲ. ಅದು ಅಮೂಲ್ಯವಾದದ್ದೂ , ಅಪರೂಪವಾದದ್ದೂ ಆಗಿದ್ದರೂ ಅದನ್ನು ಮರೆತು ಬಿಡುವುದು ಅನಿವಾರ್ಯವಾಗಿತ್ತು.
ಊಟವನ್ನು ನಾವು ಕೆಲ ಹುಡುಗರು ನಮ್ಮ ಶಾಲೆಯಿಂದ ಸುಮಾರು ೨೫೦ ಮೀ ದೂರದಲ್ಲಿದ್ದ ಒಂದು ಮರದ ಕೆಳಗೆ ಕುಳಿತು ಮಾಡುತ್ತಿದ್ದೆವು. ಪಕ್ಕದಲ್ಲಿಯೇ ಬಾವಿ, ಅಲ್ಲಿ ನೀರು ಸೇದಿ ಕುಡಿದು ; ಅದೇ ಮರದಲ್ಲಿಯೇ ಮರಕೋತಿ ಆಟ ಆಡುತ್ತಿದ್ದೆವು. ಅದೊಂದು ಅವಿಸ್ಮರಣೀಯವೂ , ಸುಖಪ್ರದವೂ ಆದ ಸಮಯವಾಗಿರುತ್ತಿತ್ತು.
ಅದು ಹೇಗೋ , ಕೆಲ ದಿನಗಳ ನಂತರ ನಮಗೆ ನಮ್ಮ ಶಾಲಾ ಶಿಕ್ಷಕರ ರೂಮ್-ಮನೆ ಸ್ವಚ್ಛಗೊಳಿಸುವ ಕೆಲಸ ಶುರುವಿಟ್ಟುಕೊಂಡೆವು. ಆಗಲೂ ಈಗಿನಂತೆ ಬ್ರಹ್ಮಚಾರೀ ಪುರುಷ ಶಿಕ್ಷಕರೂ ಕೊಪ್ಪಳದಿಂದ ಬಂದು ಹೋಗುತ್ತಿದ್ದ ಗೃಹಸ್ಥ ಶಿಕ್ಷಕರೂ ಇದ್ದರು. ಸ್ತ್ರೀ ಶಿಕ್ಷಕರಿದ್ದ ನೆನಪಿಲ್ಲ. ಅಂತಹ ೩-೪ ಶಿಕ್ಷಕರ ವಾಸಸ್ಥಾನ ಆ ಮನೆ-ರೂಮ್ .ಅದೋ ಒಂದೇ ಬಾಗಿಲಿನ ಯಾವದೇ ಕಿಟಕಿಗಳಿಲ್ಲದ ಮಣ್ಣಿನ ನೆಲದ ಮನೆ. ಅದರ ಸ್ವಚ್ಛತೆಯ ವಿವರ ನೀಡಿದರೆ ನಮ್ಮ ಶಿಕ್ಷಕರ ಜೀವನ ವಿಧಾನ ನಿಮಗೆ ಪರಿಚಯವಾದೀತು. ಶಿಕ್ಷಕರ ಕ್ಷಮೆ ಇರಲಿ . ಆ ರೂಮಿನ ಪರಿಸ್ಥಿತಿ ಹೇಗಿರುತ್ತ್ತಿತ್ತೆಂದರೆ , ಪ್ರತಿದಿನ ನಾವು ಕಸ ಗುಡಿಸುತ್ತಿದ್ದರೂ , ಮಾರನೆಯ ದಿನ ಅಲ್ಲಿ ರಾಶಿ ರಾಶಿ ಸಿಗರೇಟಿನ-ಚುಟ್ಟಾದ ತುಣುಕುಗಳಿರುತ್ತಿದ್ದವು. ಇಸ್ಪೀಟಿನ ಎಲೆಗಳಂತೂ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ಈಗ ನೆನಸಿಕೊಂಡರೂ ಹೇಸಿಗೆಯೆನಿಸುತ್ತದೆ. ಇದು ಅಂದಿನ ನಮ್ಮ ಶಿಕ್ಷಕರ ' ಸುಸಂಸ್ಕೃತ' ನಡುವಳಿಕೆಗೆ ಸಾಕ್ಷಿಯಾಗಿತ್ತು.
ಕಸ ಗುಡಿಸುವ ಮುನ್ನ ನೀರನ್ನು ಚುಮುಕಿಸಿಯೇ ಗುಡಿಸಬೇಕಾಗಿತ್ತು. ಇಲ್ಲದಿದ್ದರೆ ರಾಶಿ ರಾಶಿ ಧೂಳಿನ ಕಣಗಳು ನಮ್ಮ ಮೂಗಿನ ಹೊರಳೆಗಳನ್ನು ಸಂಪೂರ್ಣ ಮುಚ್ಚಿಬಿಡುತ್ತಿದ್ದವು. ಕ್ಷಮೆ ಇರಲಿ , ಇಷ್ಟು ಸಾಕು ನಮ್ಮ ಗುರುಗಳ ಪ್ರತಾಪ ವರ್ಣಿಸಲು. ಆದರೆ ಅಲ್ಲಿ ಕಸ ಗುಡಿಸುತ್ತಿದ್ದರಿಂದ ನಮಗೆ ಒಂದು ಲಾಭವೂ ಇತ್ತು! ಅದೆಂದರೆ ಅವರು ಗಡ್ಡ ಬೋಳಿಸಿ ಬೀಸಿ ಎಸೆದ ಬ್ಲೇಡಿನ ತುಂಡುಗಳು ಅಲ್ಲಿರುತ್ತಿದ್ದವು. ಅವೇ ನಮಗೆ ಅಂದಿನ ಅತ್ಯಾವಶ್ಯಕ ಹತಾರಗಳಾಗಿದ್ದವು- ಉಗುರು ತೆಗೆಯುವದಕ್ಕೆ ಮತ್ತು ನಮ್ಮ ಗಾಳಿ ಪಟದ ಬಾಲಂಗೋಸಿಗೆ ಬೊಫೋರ್ಸ್ ಗನ್ನಿನ ತರಹ ಗಾಳಿಪಟದ ಬಾಲಂಗೋಸಿಗೆ ಕಟ್ಟುವುದಕ್ಕೆ; ಶತೃಪಾಳೆಯದ ಮೇಲೆ ದಾಳಿ ಮಾಡುವುದಕ್ಕೆ. ಅವನ್ನು ನಾವೆಲ್ಲಾ ಹಿಪಾಜತ್ತಿನಿಂದ ಸಂಗ್ರಹಿಸಿ ನಮ್ಮ ನಮ್ಮಲ್ಲಿ ಹಂಚಿಕೊಳ್ಳುತ್ತಿದ್ದೆವು .
ಸ್ವಲ್ಪ ಕಾಲದ ನಂತರ ಬೇರೆಯ ಬ್ರಾಹ್ಮಣ ಶಿಕ್ಷಕರ ಮನೆಗೆ ನೀರು ಹೊರುವುದೂ ನನಗೆ ಒದಗಿ ಬಂದ ಅವಕಾಶ/ಕೆಲಸವಾಗಿತ್ತು . ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ಅದು ವಿಶೇಷವಾದ ವಿಚಾರವೇನೂ ಆಗಿರಲಿಲ್ಲ. ಕಾಡು ಬೆಸುಗೆಯಲ್ಲಿ ನೀರಿನ ಮಟ್ಟ ಆಳಕ್ಕಿಳಿದಿರುತ್ತಿತ್ತು. ಆಗ ನೀರು ಸೇದುವುದು ತ್ರಾಸದಾಯಕ ಕೆಲಸವಾಗಿತ್ತು.
ಈಗಿನಂತೆ ಆಗ ಶಾಲೆಗಳಲ್ಲಿ ಹೆಚ್ಚು ಸಾಂಸ್ಕೃತಿಕ - ಶೈಕ್ಷಣಿಕ ಚಟುವಟಿಕೆಗಳು ಇರುತ್ತಿರಲಿಲ್ಲ. ಸ್ವಾತಂತ್ರೋತ್ಸವ - ಊರಿನ ತುಂಬ ಪ್ರಭಾತಫೇರಿ ಹೊರಡುವುದು, ಗಣರಾಜ್ಯೋತ್ಸವ ಆಚರಿಸಿದ ನೆನಪಿಲ್ಲ. ಮತ್ತೊಂದು ಮುಖ್ಯ ಕಾರ್ಯಕ್ರಮ ಎಂದರೆ ಸರ್ವಪಲ್ಲಿ ರಾಧಾಕೃಷ್ಣನ್ನರ ಜನ್ಮ ದಿನಾಚರಣೆ - ಶಿಕ್ಷಕರ ದಿನಾಚರಣೆ. ಆಗ ಅವರು ರಾಷ್ಟ್ರಪತಿಯೋ - ಉಪ ರಾಷ್ತ್ರಪತಿಯೋ ಆಗಿದ್ದರು. ಪ್ರತಿ ವರ್ಷವೂ ಅವರ ಬಗೆಗೆ ಪ್ರಬಂಧ ಬರೆಯುವ ಸ್ಪರ್ಧೆ ಏರ್ಪಡಿಸುತ್ತಿದ್ದರು. ನಾವುಗಳು ಹಿಂದಿನ ವರ್ಷ ಬರೆದಿದ್ದ ಪ್ರಬಂಧವನ್ನು ಅತ್ಯಂತ ಜತನದಿಂದ ಕಾಪಿಟ್ಟಿದ್ದು, ಪ್ರತಿವರ್ಷವೂ ಪುನಃ ಅದನ್ನೇ ಬರೆಯುತ್ತಿದ್ದೆವು. ಸೀಸದ ಕಡ್ಡಿಯೋ ಇಲ್ಲವೆ ಒಂದು ಕಾಪಿ ಪುಸ್ತಕವನ್ನು ಕೊಡುಗೆಯಾಗಿ ಪಡೆಯುವುದು ನಮ್ಮ ಆಸೆಯಾಗಿರುತ್ತಿತ್ತು. ಅದರಲ್ಲಿ ಒಂದೆರಡು ವರ್ಷ ಸಫಲವಾದೆವು ಕೂಡ !
ಸಾಯಂಕಾಲ ೪ ಗಂಟೆಯ ಹೊತ್ತಿಗೆ ಶಾಲೆ ಮುಗಿಸಿ ಮನೆಯ ಕಡೆಗೆ ಗುಂಪು-ಗುಂಪಾಗಿ ಖುಷಿಯಿಂದ ಬರುವ ಕೆಲಸ. ನಾವು ಮಕ್ಕಳಾಗಿದ್ದರಿಂದ ಅದೇಕೋ ನಮಗೆ ಬಿಸಿಲಿನ ತಾಪ ಎಳ್ಳಷ್ಟೂ ಕಾಡುತಿರಲಿಲ್ಲ. ಬರುವಾಗ ದಾರಿಯಲ್ಲಿ ಇದ್ದ ಹೊಲಗಳಿಂದ ಶೇಂಗಾ ಕಿತ್ತು ತಿನ್ನುವುದು , ದಾರಿಯಲ್ಲಿ ಬರುವ ಹೊಲದಲ್ಲಿ ಬೋರೆ ಹಣ್ಣಿನ ಗಿಡ ಹತ್ತಿ ಹಣ್ಣು ಕಿತ್ತುವುದು ಆಗಿನ ನಮ್ಮ ಗುರಿಯಾಗಿರುತ್ತಿತ್ತು. . ಅದರಿಂದ ಹಣ್ಣು ಕಿತ್ತುವ ಸಂದರ್ಭ ನೆನೆದರೆ ಈಗಲೂ ಮೈ ಜುಂ ಎನ್ನುತ್ತದೆ. ಆಗ ತಿಳುವಳಿಕೆ ಇಲ್ಲದೆ ಅದೇಕೆ ಹಾಗೆ ಮಾಡುತ್ತಿದ್ದೆವೋ ! ಅದು ಒಂದು ಅಪಾಯಕಾರಿ ಕೆಲಸವಾಗಿತ್ತು.
ಹುಡುಗರು ಹಣ್ಣು ಕೀಳದೆ ಇರಲಿ ಜಮೀನಿನ ಒಡೆಯರು ಅದರ ಕೆಳಗೆ ಮುಳ್ಳಿನ ಬೇಲಿ ಹಾಕಿರುತ್ತಿದ್ದರು. ಆ ಮುಳ್ಳುಗಳೋ ಆಧುನಿಕ ಕಾಲದ ಸೂಜಿಗಳಿಗಿಂತಲೂ ಚೂಪಾಗಿರುತ್ತಿದ್ದವು. ಮರದ ಮೇಲೆ ಹತ್ತಿ ಹಣ್ಣು ಕೀಳುವವನದು ಒಂದು ರೀತಿಯ ಕಷ್ಟದ ಕೆಲಸವಾದರೆ , ಕೆಳಗೆ ಬಿದ್ದ ಕಸುಗಾಯಿಗಳೆಂಬ ಹಣ್ಣುಗಳನ್ನು ಆಯುವವನದು ಇನ್ನೊಂದು ರೀತಿಯ ಕಷ್ಟ. ಮೇಲೇರಿರುವವನಿಗೆ ಎಲ್ಲಿ ಮುಳ್ಳಿನ ಮೇಲೆ ಬೀಳುವೆನೋ ಎಂಬ ಭಯ, ಆಯುವವನದು ಮುಳ್ಳು ಚುಚ್ಚುವದೆಂಬ ಭಯ! ನಮ್ಮಂತಹ ಹತ್ತಾರು ಹುಡುಗರು ದಿನವೂ ಹಣ್ಣು ಕಿತ್ತರೆ ಗಿಡದಲ್ಲಿ ಹಣ್ಣುಗಳಿರುವದಾದರೂ ಹೇಗೆ ಸಾಧ್ಯ ? ಆದರೂ ನಾವು ನಮ್ಮ ದೈನಂದಿನ ಹವ್ಯಾಸ ಬಿಡುತ್ತಿರಲಿಲ್ಲ!
ಸಂಜೆ ಮನೆಗೆ ಬಂದಾಗ ಮತ್ತೆ ರೊಟ್ಟಿಯ ಊಟದ ಆಟ. ಆದರೆ ಕೆಲವೊಮ್ಮೆ ಯಾವುದೊ ತರಕಾರಿ ಹಾಕಿದ ಹುಳಿ ಜೊತೆ ಇರುತ್ತಿತ್ತು. ಒಂದೊಂದು ಸಲ ಅನ್ನವೂ ಇದ್ದು ಹೊಟ್ಟೆಗೂ ತಂಪೆನಿಸುತ್ತಿತ್ತು. ನಮ್ಮ ಮನೆಯಲ್ಲಿ ಹಾಲು ಮೊಸರು ಅಷ್ಟಕಷ್ಟೇ. ಹೊತ್ತು ತುಂಬುವ ಹತ್ತಿರ ಇದ್ದ ಮನೆಯಲ್ಲಿ ಇದ್ದಾಗ ಮನೆಯಲ್ಲಿಯೇ ಪಡುವಲಕಾಯಿ , ಚಳ್ಳಂಬರಿಕಾಯಿ , ಹಾಗೂ ಒಂದು ದೊಡ್ಡ ಮರದಲ್ಲಿ ಹತ್ತಿ ಬೆಳೆಯುತ್ತಿದ್ದೆವು. ಸೋಮುವಾರ ನಮ್ಮ ಊರಿನ ಸಂತೆ ನಡೆಯುತ್ತಿತ್ತು. ಆಗ ಒಮ್ಮೆಮ್ಮೆ ಅಪ್ಪನ ಜೊತೆ ಹೋಗಿ ಕೆಲವೊಂದು ತರಕಾರಿ ತಂದ ನೆನಪು.
ಊರಿನ ಸಾಂಸ್ಕೃತಿಕ ಲೋಕ
ಮೊದಲು ತುಂಗಭದ್ರಾ ನದಿ ಹರಿಯುತ್ತಿದ್ದಾಗ ನಮ್ಮೂರು ಒಂದು ಪ್ರಮುಖ ಸ್ಥಳವಾತ್ತಂತೆ. ಹೀಗೆಂದು ಹಿರಿಯರು ಮಾತಾಡಿಕೊಳ್ಳುತ್ತಿದ್ದರು . ಆದರೆ ನನ್ನ ಕಾಲದ ಹೊತ್ತಿಗೆ ನಮ್ಮೂರಿನ ಗಮ್ಮತ್ತು ಪಾತಾಳ ಹಿಡಿದಿತ್ತು. ಊರಿನಲ್ಲಿ ಕರಿಯಮ್ಮನ ಗುಡಿಯೂ , ನಮ್ಮ ಶಾಲೆ ನಡೆಯುತ್ತಿದ್ದ ಹನುಮಂತ ದೇವರ ಗುಡಿಯೂ ಊರಿನ ಪ್ರಮುಖ ದೇವಸ್ಥಾನಗಳು. ಇವಲ್ಲದೆ ಬಸವಣ್ಣನ ಗುಡಿ ಮತ್ತು ಬನಶಂಕರಿ ದೇವರ ಗುಡಿಗಳಿದ್ದವು. ಬಸವಣ್ಣನ ಗುಡಿ ಲಿಂಗಾಯತರ ಕೇಂದ್ರ ಸ್ಥಾನ , ಬನಶಂಕರಿ ದೇವಸ್ಥಾನ ದೇವಾಂಗದವರ- ನಾವು ‘ಜನಿವಾರದವರು’ ಎಂದು ಕರೆಯುತ್ತಿದ್ದ ಜನಾಂಗದವರ ನಿಯಂತ್ರಣದಲ್ಲಿತ್ತು.
ನಮ್ಮ ಕುಟುಂಬವೂ ಸೇರಿದಂತೆ ಊರಿನ ಬಹುತೇಕ ಎಲ್ಲ ಜನರು ಕರಿಯಮ್ಮ ಮತ್ತು ಹನುಮಂತ ದೇವರಿಗೆ ನಡೆದುಕೊಳ್ಳುತ್ತಿದ್ದರು. ಆದರೆ ಊರಿನ ಜಾತ್ರೆ ಮಾತ್ರ ಬನಶಂಕರಿಯದು! ಕೆಲ ವರ್ಷಗಳ ನಂತರ ಕರಿಯಮ್ಮನ ಜಾತ್ರೆಯನ್ನೂ ಆರಂಭಿಸಿದರು. ನನಗೆ ನೆನಪಿರುವುದು ದಸರಾ ಹಬ್ಬದಲ್ಲಿ ನಡೆಯುತ್ತಿದ್ದ ಬನಶಂಕರಿ ದೇವಿಯ ಜಾತ್ರೆ. ಅದರ ತೇರು ಕಟ್ಟುವದನ್ನು ನೋಡುವುದೇ ಒಂದು ರೋಚಕ ನೆನಪು ! ಅದಕ್ಕೆ ಬೇಕಾಗುವ ಪರಿಕರಗಳನ್ನು ಅಂದರೆ ಹಗ್ಗ , ಮಣೆಗಳು, ಗಳವುಗಳು ಇತ್ತ್ಯಾದಿಗಳನ್ನು ಅವರದೇ ಒಂದು ಹಳೆಯ ಮನೆಯಲ್ಲಿ ಇಟ್ಟಿರುತ್ತಿದ್ದರು. ತೇರು ಕಟ್ಟುವ ಕೆಲಸದಿಂದ ಹಬ್ಬ , ಜಾತ್ರೆಯ ಆಚರಣೆ ಶುರುವಾಗುತ್ತಿತ್ತು. ಎಲ್ಲ ಊರಿನ ಜಾತ್ರೆಗಳಂತೆ ನಮ್ಮ ಊರಿನ ಜಾತ್ರೆಗೂ ಊರಿನ ಜನ ಬಂಧು-ಬಳಗದವರನ್ನು ಕರೆಸುತ್ತಿದ್ದರು. ನಮ್ಮ ಮನೆಗೂ ನಮ್ಮ ತಾಯಿಯ ತವರು ಮನೆಕಡೆಯವರೂ ಹಾಗೂ ನಮ್ಮ ಅಕ್ಕಂದಿರೂ ಬರುತ್ತಿದ್ದರು.
ಬಯಲಾಟ ಆಡುವುದು ಹಾಗೂ ಆಡಿಸುವುದು ಜಾತ್ರೆಯ ಒಂದು ಮುಖ್ಯ ಕಾರ್ಯಕ್ರಮ. ನಾವು ಓರಗೆಯವರು ಬಯಲಾಟ ಆಡುವ ದಿನ ೬-೭ ಗಂಟೆಯ ಹೊತ್ತಿಗೆ ಆಟ ನಡೆಯುವವರೆಗೆ ಕುಣಿದಾಡುತ್ತ ಬಯಲಾಟ ನೋಡಬೇಕೆಂದು ಸಂಭ್ರಮಿಸುತ್ತಿದ್ದೆವು . ಆದರೆ ನಿಜವಾಗಿ ಬಯಲಾಟ ಆರಂಭವಾಗುವ ಹೊತ್ತಿಗೆ ನಿದ್ದೆಗೆ ಜಾರಿರುತ್ತಿದ್ದೆವು. ಮಕ್ಕಳಾದ ನಾವು ನಿಜವಾಗಿ ಬಯಲಾಟ ನೋಡಿರುವುದು -ಅದೂ ಕೆಲ ಹೊತ್ತು- ಕೆಲವೇ ಬಾರಿ ಮಾತ್ರ. ಆದರೆ ಬಯಲಾಟದ ಆರ್ಭಟದ ಮಾತುಗಳಾದ " ಅಹಾ ಅಗ್ರಜ , ನೀನಾರೆಂದು ಪೇಳುವಂಥವನಾಗು " ಎಂಬ ಮಾತುಗಳು ಹಾವಭಾವಗಳೊಂದಿಗೆ ನಮ್ಮ ನಾಲಿಗೆಯ ಮೇಲೆಯೇ ಕುಣಿಯುತ್ತಿದ್ದವು. ಬಯಲಾಟದ ಹಲಗೆಯ ಮೇಲಿನ ಕುಣಿತ , ಕುಣಿದಾಗ ಅದರಿಂದ ಹೊರಡುವ ‘ಡಂ’ ಎಂದು ಹೊರಡುವ ಸದ್ದು ರೋಮಾಂಚನ ಕೊಡುತ್ತಿತ್ತು. ಮಾರನೆಯ ದಿನ ಬೆಳೆಗ್ಗೆ ಗುಡಾರ, ಚಾಪೆಗಳನ್ನು ಇನ್ನೂ ಯಾರುಯಾರು ಅಲ್ಲಿಯೇ ಬಿದ್ದುಕೊಂಡಿದ್ದಾರೆಂದು ನೋಡಲು ಬೆಳೆಗ್ಗೆಯೇ ಹೋಗುತ್ತಿದ್ದೆವು , ಆಗ ರಾತ್ರಿಯೆಲ್ಲಾ ಬಯಲಾಟ ನೋಡಿದ ಇನ್ನೂ ಕೆಲವರು ಮಲಗಿರುತ್ತಿದ್ದರು.
ದಸರಾ ಶಂಕರಮ್ಮ ದೇವಿಯ ಜಾತ್ರೆಯೆಂದರೆ ದೇವೀ ಕಥೆ ಪಾರಾಯಣ ನಡೆಯುತ್ತಿತ್ತು. ಒಂದೆರಡು ಸಲ ಕತೆ, ಪ್ರವಚನ , ಪಾರಾಯಣದ ಸಂದರ್ಭದಲ್ಲಿ ಕೂತು ಕೇಳಿದ್ದೇನೆ. ಅದರಲ್ಲಿ ಬರುವ ಶುಂಭ -ನಿಶುಂಭರ ಕತೆಗಳು ; ರಕ್ತ ಬೀಜಾಸುರನ ಕತೆಗಳು , ದೇವ- ರಾಕ್ಷಸರರ ನಡುವೆ ನಡೆಯುವ ಯುದ್ಧದ ವಿವರಣೆ; ರಕ್ತಪಾತ , ಇತ್ಯಾದಿ ಅತ್ಯಂತ ಭಯಾನಕ ಹಾಗೂ ಭೀಭತ್ಸವಾಗಿರುತ್ತಿದ್ದವು. ಇದು ಚಿಕ್ಕ ಹುಡುಗನಾಗಿದ್ದ ನನ್ನ ಮೇಲೆ ಗಂಭೀರ ಪರಿಣಾಮ ಬೀರಿತು. ಮತ್ತೊಮ್ಮೆ ಮುಂದೇನಾಯಿತು ಎಂದು ತಿಳಿಯುವ ಕುತೂಲದಿಂದ ಇನ್ನೊಂದು ವರುಷ ಮತ್ತೆ ಕತೆ ಕೇಳಲು ಕುಳಿತೆ. ಈ ಸಲ ದೇವಿ ತನ್ನ ನಾಲಗೆಯನ್ನು ಇಡೀ ಯುದ್ಧಭೂಮಿಯ ಉದ್ದಕ್ಕೂ ಹರಡಿ , ಒಂದು ಹನಿ ರಕ್ತವೂ ಭೂ ಒಡಲನ್ನು ಸೇರದಂತೆ ತಡೆದು ಸಂಹರಿಸಿದ್ದು ಕೇಳಿ ನಿಟ್ಟುಸಿರುಬಿಟ್ಟ ನೆನಪು . ಮತ್ತೆ ಆಮೇಲೆ ಎಂದೂ ಆ ದೇವೀ ಕತೆ ಕೇಳಲು ಹೋಗಲಿಲ್ಲ . ಈಗಲೂ ಈ ವಯಸ್ಸಿನಲ್ಲೂ ಪ್ರತಿ ವರ್ಷ ದಸರಾ ಸಮಯದಲ್ಲಿ ಎಲ್ಲಾದರೂ ದೇವೀ ಕತೆ ಪಾರಾಯಣ ನೆಡೆಯುತ್ತಿದ್ದರೆ ಅದೇ ಕತೆಯ ವಿವರಣೆ ಕಣ್ಣ ಮುಂದೆ ಬಂದಂತಾಗುತ್ತದೆ .
ನಾಟಕದ ಗೀಳು
ಉತ್ತರ ಕರ್ನಾಟಕವೆಂದರೆ ಕಂಪನಿಯ ನಾಟಕಗಳ ತವರೂರು . ನಮ್ಮ ಊರಿನಲ್ಲಿಯೂ ನಾಟಕದ ಗೀಳಿನ ಜನ ಸಾಕಷ್ಟಿದ್ದರು. ಅದೊಂದು ಖಯಾಲಿ ; ಮೈಗಳ್ಳರಿಗೂ , ಸ್ತ್ರೀಲೋಲುಪರಿಗೂಂದು ರಹದಾರಿ. ಹೀಗಾಗಿ , ವರ್ಷಕ್ಕೊಂದು ಬಾರಿಯಾದರೂ ಯಾವುದಾದರೊಂದು ಕಂಪನಿಯ ನಾಟಕ ಊರಿನಲ್ಲಿ ನಡೆಯುತ್ತಿತ್ತು. ಹಣವಿಲ್ಲದಿದ್ದರಿಂದ ನಾವು ನಾಟಕ ನೋಡುವುದು ಕಷ್ಟವೇ ಆಗಿತ್ತು. ಆದ್ದರಿಂದ ಕಟ್ಟಿದ ಗುಡಾರವನ್ನು ಸೀಳಿ , ಇಲ್ಲವೇ ಸಂದಿಯಿಂದ ತೂರಿ ಕಳ್ಳತನದಿಂದ ಒಳನುಸುಳಿ ನಾಟಕ ನೋಡಿದ ಅನುಭವಿದೆ. ಏನೇ ಆದರೂ ನಾಟಕವಿರಲಿ ಇಲ್ಲವೇ ಬಯಲಾಟವಿರಲಿ ಅಂದಿನ ಸಂಜೆ ಅವುಗಳ ಆರಂಭದವರೆಗೂ ಸಂಭ್ರಮದಿಂದ ಓಡಾಡುವುದೇ ನಮ್ಮ ಸೌಭಾಗ್ಯವಾಗಿತ್ತು.
ನಾಟಕ -ಬಯಲಾಟಗಳ ನಡುವೆ ಪಾತ್ರಧಾರಿಗಳಿಗೆ ' ಆಯರು' ಹಾಕುವ ಪ್ರಹಸನ ನಡೆಯುತ್ತಿತ್ತು. ಆಯರು ಹಾಕುವದು ಒಂದು ಸಡಗರದ ಮತ್ತು ಸಂಭ್ರಮದ ಹಾಗೂ ದೊಡ್ಡಸ್ತಿಕೆಯ ಪ್ರತೀಕವಾಗಿತ್ತು. ಅದೊಂದು ತಮಾಷೆಯ ಪ್ರಹಸನ ಕೂಡ. ಯಾಕೆಂದರೆ ಬಂಗಾರ , ಸರ ಇಲ್ಲವೇ ದೊಡ್ಡ ಮೊತ್ತದ ಹಣವನ್ನು ಅವರು ಉತ್ತಮ ಪಾತ್ರ ನಿರ್ವಹಿಸಿದವರಿಗೆ ನೀಡದೆ ಎಷ್ಟೇ ಕೆಟ್ಟದಾಗಿ ಪಾತ್ರ ಮಾಡಿದ್ದರೂ ಅವರು ತಮ್ಮ ಬಂಧುಗಳ ಪಾತ್ರಧಾರಿಗಳಿಗೇ ನೀಡಿ ತಮ್ಮ ದೊಡ್ಡಸ್ತಿಕೆಯನ್ನು ಊರ ಜನಕ್ಕೆ ತೋರಿಸುತ್ತಿದ್ದರು. ಇದು ಅಂದು ಬಾಲಕರಾಗಿದ್ದ ನಮಗೆ ಹೇಗೆ ತಿಳಿಯಬೇಕು.?
ಸ್ವಂತ ನಾಟಕ ಮಾಡಿದ್ದು
ಅಂತೂ ಹುಡುಗರಾಗಿದ್ದ ನಮಗೂ ನಾಟಕದ ಹುಚ್ಚು ಹಿಡಿದಿತ್ತು. ನಾವೂ ನಾಟಕ ಮಾಡಬೇಕೆಂದು ಹೊಂಚಿ, ಹವಣಿಸಿ, ಹಠ ಹಿಡಿದು ನಾಟಕ ಮಾಡಿ ದೊಡ್ಡ ಆಸೆಯನ್ನು ತೀರಿಸಿಕೊಂಡಿದ್ದೂ ಆಯಿತು . ನಾಟಕದ ವಿಷಯ ಪಾತ್ರಗಳ ವಿವರ ಎಲ್ಲ ಮರೆತು ಹೋಗಿದ್ದರೂ ನಾಟಕಕ್ಕೆ ನಡೆಸಿದ್ದ ಸಿಧ್ಧತೆ; ಪರದೆಗಳಿಗಾಗಿ ಮನೆಯಿಂದ ಚಾದರುಗಳನ್ನು ತೆಗೆದುಕೊಂಡು ಹೋಗಿದ್ದು , ಸಿಕ್ಕ ಸಿಕ್ಕ ಗಳವುಗಳನ್ನು ಬಳಸಿ ಪರದೆ ಮಾಡಿಕೊಂಡಿದ್ದು ಇನ್ನೂ ಚೆನ್ನಾಗಿ ನೆನಪಿನಲ್ಲಿದೆ.
ಅಂತೂ ನಮ್ಮ ನಾಟಕ ಏರ್ಪಾಟಾಗಿ ಅದಕ್ಕಾಗಿ ಸಾಕಷ್ಟು ತಾಲೀಮು ನಡೆಸಿ ಒಂದು ದಿನ ರಂಗದ ಮೇಲೂ ಬಂತು. ಅದೂ ಶಂಕ್ರಮ್ಮ ದೇವರ ಎದುರಿನ ಮನೆಯ ಕಟ್ಟೆಯ ಮೇಲೆ . ನಾಟಕ ಎಂದ ಮೇಲೆ ನಮ್ಮ ನಾಟಕದಲ್ಲೂ ' ಆಯರಿ' ಹಾಕುವದು ಇರಲೇ ಬೇಕಲ್ಲವೇ? ಅದೂ ಆಯಿತು. ತಮಗೆ ಬೇಕಾದ ಕೆಲ ಪಾತ್ರಧಾರಿಗಳಿಗೆ ! ಒಟ್ಟು ತಂಡಕ್ಕೆ ಅಂತ ಕಳಸದ ನಿಂಗವ್ವ ೨೫ ರೂಪಾಯಿಗಳನ್ನು ನೀಡುವದಾಗಿ ಘೋಷಿಸಿದಳು. ಅದನ್ನು ದೊಡ್ಡ ದನಿಯಲ್ಲಿ ಘೋಷಿಸಿದ್ದೂ ಆಯಿತು . ನಮಗೆಲ್ಲರಿಗೂ ತುಂಬಾ ಖುಷಿ . ಆಗಿನ ಕಾಲಕ್ಕೆ ಅದು ದೊಡ್ಡ ಮೊತ್ತವೇ ಆಗಿತ್ತು.
ನಾಟಕವಾದ ಮೇಲೆ ನಾವು ಆಕೆ ಕೊಡುವ ಹಣ ಏನು ಮಾಡುವದು ಎಂದು ಗಂಭೀರ ಚರ್ಚೆ ನಡೆಸಿದೆವು. ಆದರೆ ನಾಟಕದ ೪-೫ ದಿನಗಳ ನಂತರ ನಡೆದದ್ದೇ ಬೇರೆ. ಅದು ನಾವ್ಯಾರೂ ಊಹಿಸಿರದಿದ್ದದ್ದು. ಕಳಸದ ನಿಂಗವ್ವ ನಮ್ಮನ್ನು- ಹುಡುಗ ಮುಖಂಡರನ್ನು ಕರೆಸಿ “ನೀವು ಹುಡುಗರು ಹಣ ತೆಗೆದುಕೊಂಡು ಏನು ಮಾಡುತ್ತೀರಿ “, ಎಂದು ಹೇಳಿ ತನ್ನ ತೀರ್ಮಾನ ಪ್ರಕಟಿಸಿದಳು. ಅದೇನೆಂದರೆ , ಒಂದು ಶುಭ ದಿನ ನಾಟಕಕ್ಕಾಗಿ ಶ್ರಮಿಸಿದ , ಪಾತ್ರ ಮಾಡಿದ ಎಲ್ಲರಿಗೂ ಕರೆಸಿ ಮಂಡಕ್ಕಿ ವಗ್ಗರಣೆ ಹಾಕಿಸುವುದು ಎಂದು. ಆ ತೀರ್ಮಾನದಿಂದ ನಮ್ಮೆಲ್ಲ ಆಶೆಗಳೂ, ಯೋಜನೆಗಳೂ ಮಣ್ಣುಪಾಲಾಗಿದ್ದವು. ಆದರೆ ನಾವು ಅಸಹಾಯಕರಾಗಿದ್ದೆವು. ಭಿಕ್ಷುಕರಿಗಾದರೂ ಆಯ್ಕೆಗಳಿರುತ್ತವೆ ಅಲ್ಲವೇ? ಬೇರೆ ದಾರಿ ಕಾಣದೆ ಮಕ್ಕಳಾದ ನಾವು ತೆಪ್ಪಗೆ ಒಪ್ಪಿಕೊಂಡು ಅವರ ಮನೆಯಲ್ಲಿಯೇ ' ಜಲಸಾ' ಸ್ವೀಕರಿಸಿ ಸಮಾಧಾನ ಪಟ್ಟುಕೊಂಡೆವು.
ಭಾರತ ಗಮಕ ವಾಚನ ವ್ಯಾಖ್ಯಾನ
ನಮ್ಮೂರಿನಲ್ಲಿ ಯಾವಾಗಲೂ ಬೆಸುಗೆಯೇ. ಆ ಒಂದು ಸಂದರ್ಭದಲ್ಲಿ ನಾವು ಈ ಹಿಂದೆ ಕೊತ್ತಲಚಾರ್ ಎಂಬ ಮಾಸ್ತರರು ಕೊಪ್ಪಳಕ್ಕೆ ಹೋದ ಮೇಲೆ ನಾವು ಆ ಮನೆಗೆ ಸ್ಥಳಾಂತರಿಸಿದೆವು. ಅದೂ ಕೂಡ ನಮ್ಮ ಸಾಹುಕಾರರ ಮನೆಯೇ. ಆ ಮನೆಗೆ ಒಂದು ದೊಡ್ಡ ಬೆಳಕಿನ ಕಿಂಡಿ ಇತ್ತು. ನಾವು ಹುಡುಗರು ಮಾಳಿಗೆಯ ಮೇಲಿನಿಂದ ಆ ಬೆಳಕಿಂಡಿಯ ಮೂಲಕ ಅಡುಗೆ ಮನೆಗೆ ಹಾರಿ ಸಾಹಸ ಮೆರೆಯುತ್ತಿದ್ದೆವು. ಈ ಮನೆಯ ಮಾಳಿಗೆಗೆ ಹೋಗಲು ಒಂದು ಸಣ್ಣ ಬಾವಿಯಿದ್ದ - ದೆವ್ವದ ಮನೆ ಎಂದು ಹೇಳುತ್ತಿದ್ದ ಮನೆಯ ಮೂಲಕವೇ ಹೋಗಬೇಕಾಗಿತ್ತು. ಅದೇಕೋ ನನಗೆ ತಿಳಿಯದು ಸಾಹುಕಾರರ ಆ ಮನೆಯನ್ನು ಯಾವಾಗಲೂ ಉಪಯೋಗಿಸುತ್ತಿರಲಿಲ್ಲ ಮತ್ತು ತೆರೆಯುತ್ತಿರಲಿಲ್ಲ . ಇಂತಹ ಮನೆಯ ಪಕ್ಕವಿದ್ದ ಒಂದು ಮನೆಯಲ್ಲಿ ನಾವು ವಾಸವಿದ್ದೆವು.
ಈ ಮನೆಯ ಕಟ್ಟೆಯೇ ನಮ್ಮ ಗಮಕ ಸಭಾಂಗಣ. ಆಗ ನಾವು ಕೇವಲ ಭಾರತ ವಾಚನ ಎಂದು ಹೇಳುತ್ತಿದ್ದೆವು. ಪರ್ವತಗೌಡ ಎಂಬ ಜಾನಪದ ಕಲಾವಿದ ಸಾಯಂಕಾಲ ಎಂಟು ಗಂಟೆಯ ನಂತರ ಅವ್ವ ಕೊಟ್ಟ ರೊಟ್ಟಿ ತೊಕ್ಕು ತಿಂದು ,ಗದುಗಿನ ಕುಮಾರವ್ಯಾಸ ಭಾರತವನ್ನು ರಾಗಬಧ್ಧವಾಗಿ ಹಾಗೂ ಸುಶ್ರಾವ್ಯವಾಗಿ ಹಾಡಿ ನಂತರ ಸರಳ ಕನ್ನಡದಲ್ಲಿ ವ್ಯಾಖ್ಯಾನ -ವಿವರಣೆ ಕೊಡುತ್ತಿದ್ದರು. ಕಥೆ, ವಿವರಣೆ, ರಾಗಬದ್ಧವಾಗಿ ಹಾಡುವ ರೀತಿ ನಮಗೆ ಮಹಾಭಾರತ ಕಾಲಕ್ಕೇ ಕೊಂಡೊಯ್ಯತ್ತಿತ್ತು ! ಆದ್ದರಿಂದ ಈಗಲೂ ಗಮಕ, ಭಾರತ ವಾಚನ ಎಂದರೆ ಪರ್ವತಗೌಡನೇ ನೆನಪಿಗೆ ಬರುತ್ತಾರೆ.
ಕುಸುಬೆ ಎಣ್ಣೆ ಗಾಣ ಗ್ರಾಮಭಾರತದ ಪ್ರತಿರೂಪ
ಈಗೆಲ್ಲ ನಾವು ಅಡುಗೆಗೆ ಅನೇಕಾನೇಕ ರೀತಿಯ ಎಣ್ಣೆ ಬಳಸುತ್ತೇವೆ. ನಮ್ಮ ಪ್ರದೇಶದಲ್ಲಿ ಹೆಚ್ಚಾಗಿ ನೆಲಗಡಲೆ ಬೆಳೆಯುತ್ತಾರೆ . ಹಾಗೆಯೇ ಕುಸುಬೆ ಎಂದು ಕರೆಯುವ ಒಂದು ರೀತಿಯ ಸೂರ್ಯಕಾಂತಿ ಬೀಜದ ತರಹವೇ ಇರುವ ಎಣ್ಣೆ ಬೀಜವನ್ನು ಯಥೇಚ್ಛವಾಗಿ ಬೆಳೆಯುತ್ತಾರೆ . ಆಗೆಲ್ಲ ಹೆಚ್ಚಾಗಿ ಅವೇ ನಮ್ಮ ಎಣ್ಣೆಯ ಮೂಲಗಳಾಗಿದ್ದವು . ಇಂಥ ಒಂದು ಎಣ್ಣೆ ತೆಗೆಯುವ ಗಾಣವೂ ನಮ್ಮೂರಿನಲ್ಲಿತ್ತು . ಅಲ್ಲಿ ಒಂದು ಎತ್ತಿನ ಗಾನ, ಮದ್ಯದಲ್ಲಿ ಮೇಟಿಯಿದ್ದು ಅದರ ಸುತ್ತಲೂ ಒರಳಿನಾಕಾರದ ಜಾಗದಲ್ಲಿ ಕುಸುಬೆ ಬೀಜಗಳನ್ನು ಹಾಕಿ ಎತ್ತ್ತಿನ ಕಣ್ಣಿಗೆ ಬಟ್ಟೆ ಕಟ್ಟಿ ತಿರುಗಿಸುತ್ತಿದ್ದರು . ಎಣ್ಣೆ ಬಿಟ್ಟ ಹಿಂಡಿಯನ್ನು ಅಚ್ಚುಗಳಾಗಿ ಮಾಡಿ ಕೊಪ್ಪಳದ ಪೇಟೆಗೆ ಕಲಿಸುತ್ತಿದ್ದರು. ಹುಡುಗರಾದ ನಮಗೆ ಹಸಿ ಕುಸುಬೆಯನ್ನು ತಿನ್ನಲು ತುಂಬಾ ಇಷ್ಟವಾಗುತ್ತಿತ್ತು. ಈಗ ನಾನಿರುವ ಬೆಂಗಳೂರು ಪೇಟೆಯಲ್ಲಿ ಎಷ್ಟು ಕೇಳಿದರೂ ಕುಸುಬೆ ಎಣ್ಣೆ ಹಾಗೂ ಕುಸುಬೆ ಸಿಗದು!
ಭಜನಾ ಮಂಡಳಿ
ದಸರೆಯ ಸಮಯದಲ್ಲಿ ಮತ್ತು ನಂತರ ನಮ್ಮೂರಿನಲ್ಲಿ ತುಂಗಭದ್ರಾ ನದಿಯ ಭರ್ಜರಿ ಹಿನ್ನೀರಿರುತ್ತಿತ್ತು.. ನಮ್ಮೂರು ಆಗ ಒಂದು ರೀತಿಯ ಭಾರತದ 'ವೆನಿಸ್' ನಗರವೆಂದರೂ ತಪ್ಪಲ್ಲ. ಮನೆಯಿಂದ ಹೊಸಿಲು ದಾಟಿದರೆ ಮೊಣಕಾಲು-ನಡು ಉದ್ದದ ನೀರುತ್ತಿತ್ತು. ಅದು ಚಳಿಗಾಲದ ಆರಂಭ ಕೂಡ. ಆಗ ನಮ್ಮೂರಿನ ಭಜನಾ ಮಂಡಳಿಯೊಂದು ಬೆಳಗಿನ ಜಾವ ಸುಮಾರು ೫ ಗಂಟೆಯ ಹೊತ್ತಿಗೆ ಹನುಮಂತ ದೇವರ ಗುಡಿಯಿಂದ ಕರಿಯಮ್ಮ ದೇವರ ಗುಡಿಯವರೆಗೆ ನೀರಿನಲ್ಲಿಯೇ ಭಜನೆ ಮಾಡುತ್ತಾ ನಡೆದು ಹೋಗುವ ಕ್ರಮವಿತ್ತು. ಅದೇಕೋ ಆಗ ನಾನು ಅದರಿಂದ ಬಹು ಆಕರ್ಷಿತನಾಗಿದ್ದೆ. ಒಂದೆರಡು ದಿನ ನಾನು ಅವರ ಜೊತೆಗೂಡಿದೆ. ಚಳಿ ಹಾಗೂ ನೀರಿನಲ್ಲಿ ನಡೆಯಬೇಕಾಗಿದ್ದರಿಂದ ನಮ್ಮ ತಂದೆ ನನ್ನನ್ನು ನಿರ್ಬಂಧಿಸಿದರು . ಅದರಿಂದ ಕೆಲ ದಿನ ನನಗೆ ತುಂಬಾ ನಿರಾಸೆಯಾಯಿತು. ಆಮೇಲೆ ಕೆಲ ತಿಂಗಳ ನಂತರ ಅವರ ತಾಳವಿಲ್ಲದ ಕೆಟ್ಟ ದನಿಯ ತಪ್ಪಡಿಯ ಸದ್ದು , ಹಾಗೂ ಅವರ ರಾಗಗಳೂ ನನಗೆ ಕರ್ಕಶವಾಗಿ ಕೇಳಲಾರಂಭಿಸಿದವು . ಸಂಗೀತಕ್ಕಿಂತ ಅವರಿಗೆ ಭಕ್ತಿ ಮುಖ್ಯವಾಗಿತ್ತು. ಆದರೆ ನನ್ನಲ್ಲಿ ಹೋಗಲಾಗದಿದ್ದ ನೋವು ಕೆಲ ದಿನ ಇದ್ದು ನಂತರ ಮರೆಯಾಯಿತು.
ಅಲಾಯಿ ಹಬ್ಬ
ಈ ಮೊದಲೇ ನಾನು ಹೇಳಿದಂತೆ ನಮ್ಮ ಪ್ರದೇಶ ಶತಮಾನಗಳ ಕಾಲ ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಆದ್ದರಿಂದ ಆಗ ಮುಸ್ಲಿಂ ಜನಾಂಗದ ಪ್ರಭಾವ ಮತ್ತು ಪ್ರಾಬಲ್ಯ ತುಂಬಾ ಇತ್ತು . ಈಗಲೂ ಇದೆ. ಆಗ ಮುಸ್ಲಿಂ ಹಬ್ಬದ ಆಚರಣೆಗಳು ವರ್ಷ ವರ್ಷವೂ ಜೋರಾಗಿ ನಡೆಯುತ್ತಿದ್ದವು. ಅದರಲ್ಲಿಮುಖ್ಯವಾದದ್ದು ಅಲಾಯಿ ಹಬ್ಬ ಅಂದರೆ ಈಗಿನ ಮೊಹರಂ ಹಬ್ಬ .ಆಗ ನನಗೆ ಈ ಹೆಸರೂ ತಿಳಿದಿರಲಿಲ್ಲ . ಅಲಾಯಿ ದೇವರೆಂದರೆ ಮೂರು ಬೆರಳಿನ ಐದು ಬೆರಳಿನ ಗುರುತಿರುವ ದೇವರು. ಅದರರ್ಥ ಏನೆಂದು ನನಗೀಗಲೂ ತಿಳಿದಿಲ್ಲ. ಪೀರಲು ಹಬ್ಬವೆಂದೂ ಕೆಲ ಕಡೆ ಕರೆಯುತ್ತಾರೆ. ಈ ಹಬ್ಬ ನಮ್ಮ ಊರಿನಲ್ಲಿ ಎರಡು ತುಂಬಾ ವಿಜೃಂಭಣೆಯಿಂದ ನಡೆಯುತ್ತಿತ್ತು. ಮುಸ್ಲಿಮರೂ , ಹಿಂದುಗಳೂ ಇದರಲ್ಲಿ ಭಾಗವಹಿಸಿ ಸಕ್ಕರೆ ಪ್ರಸಾದ ಅರ್ಪಿಸುವುದು ಈ ಹಬ್ಬದ ವಿಶೇಷ. ನಂತರ ಭಕ್ತರಿಗೆ ಕೊಡುತ್ತಿದ್ದರು. ನಾವೂ ಕೆಲವೊಮ್ಮೆ ಅದನ್ನು ಸ್ವೀಕರಿಸಿದ್ದೇವೆ.
ಕೆಲವು ದಿನ ಈ ದೇವರನ್ನು ಕೂರಿಸಿ , ಆಮೇಲೆ ಊರ ತುಂಬಾ ಮೆರವಣಿಗೆ ಮಾಡಿ , ಎದೆ ಬಡಿದುಕೊಳ್ಳುತ್ತಾ ಶೋಕ ವ್ಯಕ್ತಪಡಿಸುವುದು ಇದರ ಆಚರಣಾ ರೀತಿಯಾಗಿತ್ತು. ಕೊನೆಯ ದಿನ ಮೊದಲೇ ತೋಡಿದ ಒಂದು ಗುಂಡಿಯಲ್ಲಿ ಬೆಂಕಿ ಹಾಕಿದ್ದು ಅದರ ಮೇಲೆ ನಡೆಯುವುದು ಆ ಹಬ್ಬದ ಆಚರಣೆಯ ಒಂದು ಭಾಗ. ಆಗ ದೇವರು ಮೈಮೇಲೆ ಬಂದು ಕೆಲ ದುಷ್ಟರನ್ನು ಹೊಡೆಯುವ ಮೂಲಕ ಶಿಕ್ಷಿಸುತ್ತಿದ್ದರು ಎಂದೂ ಹೇಳುತ್ತಿದ್ದರು. ಅಂತಿಮ ದಿನದ ತನಕ ನಾನು ಇದೆಲ್ಲ ಬುರುಡೆ ಎಂದು ಅಂದುಕೊಳ್ಳುತ್ತಿದ್ದೆ ಆದರೆ ಕೊಂಡ ಹಾಯುವ ದಿನ ದೇವರೆಲ್ಲಿ ನನ್ನನ್ನು ಶಿಕ್ಷಿಸುತ್ತಾನೆಂದು ನಾನು ಭಯಪಡುತ್ತಿದ್ದೆ. ದೇವರೇ ನಾನು ಇನ್ನು ಮೇಲೆ ನಿನ್ನನ್ನು ಸಂದೇಹಿಸುವುದಿಲ್ಲವೆಂದೂ ಪರಿಪರಿಯಾಗಿ ಮನಸಿನಲ್ಲೇ ಹೇಳಿಕೊಂಡು ಅಲಾಯಿ ದೇವರು ನನಗೆ ಶಿಕ್ಷಿಸದಿರು ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದೆ. ಮಕ್ಕಳಾದ ನಮ್ಮ ಅಂದಿನ ಮನಸ್ಥಿತಿ ಹಾಗಿತ್ತು. ಮಾರನೆಯ ದಿನ ಬೆಳಗಿನ ಜಾವ ಅಲಾಯಿ ಕುಣಿಯಲ್ಲಿ ಉಳ್ಳಾಗಡ್ಡೆ ಸುತ್ಟ್ಟು ತಿನ್ನುತ್ತಿದ್ದೆವು . ಚೀನಾ , ಪಾಕಿಸ್ತಾನ ಯುದ್ಧಗಳಿಂದಾಗಿ ಆಗ ಆಹಾರ ಸಮಸ್ಯೆ ಉತ್ಕಟವಾಗಿತ್ತು. ನಮಗೋ ಹಸಿವು ಬೆನ್ನಿಗಂಟಿದ ಬಳುವಳಿಯಾಗಿತ್ತು.
ಗಾಳಿಪಟದ ಹವ್ಯಾಸ
ಆಷಾಢ ಮಾಸದ ಗಾಳಿ ಹಾವಳಿ ಶುರುವಾಗುವ ಮೊದಲು ನಮ್ಮೂರಿನ ಎಲ್ಲ ಗಂಡು ಹುಡುಗರಿಗೆಲ್ಲಾ ಗಾಳಿಪಟ ಸ್ವತಃ ಮಾಡಿ ಹಾರಿಸುವ ಹವ್ಯಾಸ. ಪ್ರತಿವರ್ಷ ಅದು ನಮ್ಮನ್ನೂ ನನ್ನನ್ನೂ ಆವರಿಸುತ್ತಿತ್ತು. ಪ್ರತಿ ದಿನವೂ ಒಂದೊಂದು ಗಾಳಿಪಟ ಮಾಡುವದು! ಅದಕ್ಕೆ ಸರಿ ಅಂದರೆ ಅಂಟು ಹೊಂದಿಸುವುದು , ಸಿಬುರು , ಹಾಳೆ ಕಲೆಹಾಕುವುದು ಒಂದು ಸಾಹಸವೇ ಆಗಿತ್ತು. ಆದರೂ ನಮ್ಮ ಪ್ರಯತ್ನ ಮಾತ್ರ ನಿಲ್ಲುತ್ತಿರಲಿಲ್ಲ. ಕುರುಬರ ಓಣಿಯಿಂದ ಕಂಬಳಿ ನೇಯುವ ಸಲುವಾಗಿ ಬಳಸಿ ಉಳಿದ ಸರಿಯನ್ನು ಎಸೆಯುತ್ತಿದ್ದರು. ಉರಿ ಬಿಸಿಲಿನ ಮಧ್ಯಾಹ್ನದ ಹೊತ್ತು ಅದನ್ನು ಸಂಗ್ರಹಿಸಿ ತಂದು ೨-೩ ಹುಡುಗರು ಜೊತೆಗೂಡಿ ತಮ್ಮ ತಮ್ಮ ಪಟ ಮಾಡುತ್ತಿದ್ದೆವು. ದಿನಕ್ಕೊಂದು ಗಾಳಿಪಟ! ಆದರೆ ದಾರ ಹಾಗೂ ಪ್ರಮಾಣಬದ್ಧ ಸೂತ್ರದ ಕೊರತೆಯಿಂದಾಗಿ ಅವು ದಾಸನು ಮಾಡಿದ ಪಟದಂತೆ ಸರಾಗವಾಗಿ ಮೇಲೇರುತ್ತಿರಲಿಲ್ಲ ! ಅವನೋ ಕುಶಲತೆಯಿಂದ ಪ್ರಮಾಣಬದ್ಧವಾಗಿ ಮಾಡಿರುತ್ತಿದ್ದ ! ಆದ್ದರಿಂದ ಅವನವು ಸುಲಭವಾಗಿ ಮೇಲೇರಿ ಮೆರೆಯುತ್ತಿದ್ದವು. ಈ ಕಾರಣಕ್ಕಾಗಿ ನಾನು ಕೆಲವೊಮ್ಮೆ ೧೦-೨೫ ಪೈಸೆ ಕೊಟ್ಟು ಅವನಿಂದ ಕೊಂಡಿದ್ದೂ ಉಂಟು.
ಹುಣ್ಣಿಮೆಯ ದಿನ ಗಾಳಿಪಟ ಹಾರಿಸುವ ಸ್ಪರ್ಧೆ ಏರ್ಪಡಿಸುತ್ತಿದ್ದರು. ಸ್ಪರ್ಧೆಯ ನಿಯಮದಂತೆ ತಮ್ಮ ಗಾಳಿಪಟದ ಬಾಲಂಗೋಸಿಗೆ ಕಟ್ಟಿದ ಹತಾರಗಳಿಂದ ಇನ್ನೊಬ್ಬರ ಪಟದ ದಾರವನ್ನು ಕತ್ತರಿಸಬಹುದಾಗಿತ್ತು. ಅದಕ್ಕಾಗಿ ನಾವು ಈ ಮೊದಲೇ ಹೇಳಿದ ನಮ್ಮ ಮೇಷ್ಟ್ರು ಗಡ್ಡ ಬೋಳಿಸಿ ಎಸೆದ ಬ್ಲೇಡುಗಳನ್ನು ನಮ್ಮ ಪಟದ ಬಾಲಕ್ಕೆ ಬೊಫೋರ್ಸ್ ಗನ್ನುಗಳಂತೆ ಕಟ್ಟಿ ಇನ್ನೊಬ್ಬರ ಗಾಳಿಪಟದ ದಾರವನ್ನು ಕತ್ತರಿಸಲು ಪ್ರಯತ್ನಿಸುತ್ತಿದ್ದೆವು. ಇತರರೂ ಹಾಗೆಯೇ ಮಾಡುತ್ತಿದ್ದರು. ಆದರೂ ಕುಶಲತೆಯ ಕೊರತೆಯಿಂದಾಗಿ ನಮಗೆ ಅನೇಕ ಸಲ ಸೋಲಾಗುತ್ತಿತ್ತು . ಆದರೂ ಮುಂದಿನ ವರ್ಷ ಮತ್ತದೇ ಪ್ರಯತ್ನ -ಹೊಸ ಉತ್ಸಾಹದಿಂದ !
ಮಂಡಕ್ಕಿ ಎಂಬ ಮಾಯೆ
ಆಗ ನಮ್ಮ ಮನೆಯಲ್ಲಿ ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟದ ಪರಿಪಾಠ ಮಾತ್ರ ಇತ್ತು. ಆದರೂ ಆಗೊಮ್ಮೆ ಈಗೊಮ್ಮೆ ಬೆಳಗ್ಗೆ ಮಂಡಕ್ಕಿ ವಗ್ಗರಣೆ , ಸಾಯಂಕಾಲ ಮಂಡಕ್ಕಿ ಹಚ್ಚುವ ಸಂದರ್ಭಗಳೂ ಇಲ್ಲದಿರಲಿಲ್ಲ.
ಸಾಯಂಕಾಲದ ತಿಂಡಿ ಎಂದರೆ ಮಾಡಲು ಸುಲಭದ , ಕಡಿಮೆ ಖರ್ಚಿನ ಹೆಚ್ಚು ಪದಾರ್ಥ ಬೇಕಿರದ - ಹಚ್ಚಿದ ಮಂಡಕ್ಕಿ. ಅದಕ್ಕೆ ಬೇಕಾಗುವ ಸಾಮಾನುಗಳು ಅಂದರೆ ಮುಖ್ಯವಾಗಿ ಮಂಡಕ್ಕಿ , ಎಣ್ಣೆ , ವಗ್ಗರಣೆ ಕಾಳುಗಳು , ಅರಿಶಿನ ಪುಡಿ ಹಾಗೂ ಶೇಂಗಾ ಬೀಜ . ಆದರೆ ಇವುಗಳಲ್ಲಿ ಅಂಗಡಿಯಿಂದ ತರಬೇಕಾಗಿದ್ದದ್ದು ಮುಖ್ಯವಾಗಿ ಮಂಡಕ್ಕಿ ಮತ್ತು ಎಣ್ಣೆ ಮಾತ್ರ. ನಮ್ಮ ಪ್ರದೇಶದಲ್ಲಿ ಶೇಂಗಾ ಹೆಚ್ಚು ಬೆಳೆಯುವದರಿಂದ ಅವು ಸದಾ ಕಾಲ ಮನೆಯಲ್ಲಿರುತ್ತಿದ್ದವು.
ಕೆಲವೊಮ್ಮೆ ಮೇಟಿ ಕೊಟ್ರಪ್ಪನ ಅಂಗಡಿಗೆ ಗಾಜಿನ ಬಾಟಲಿ ಹಿಡಿದು ೪-೫ ಸೇರು ಮಂಡಕ್ಕಿ ಹಾಗೂ ಅರ್ಧ ಸೇರು ಕಡಲೆ ಎಣ್ಣೆ ಉದ್ರಿ ತರಲು ಓಡಿಸುತ್ತಿದ್ದರು. ನಂತರ ಅವ್ವ ದೊಡ್ಡ ಬಾಂಡಲಿಯಿಟ್ಟು ಸಿದ್ಧಪಡಿಸುತ್ತಿದ್ದಳು. ಅವ್ವನ ಸಮಸ್ಯೆ ತಯಾರಿಸುವದಲ್ಲ; ಅದನ್ನು ಹಂಚುವುದು. ಅವನಿಗೆ ಹೆಚ್ಚು, ನನಗೆ ಕಡಿಮೆ ಎಂದು ಅಳುವದು, ರೊಳ್ಳಿ ತೆಗೆಯುವುದು ನಡೆಯುತ್ತಿದ್ದವು. ಅವ್ವ ಆಗ ರೋಸಿ ಹೋಗುತ್ತಿದ್ದಳು. ಆಗ ಅವ್ವ ನಾವೆಷ್ಟು ಹುಡುಗರಿದ್ದೆವೊ ಅಷ್ಟು ತಟ್ಟೆಗಳಲ್ಲಿ ಆದಷ್ಟು ಸಮನಾಗಿ ಹಾಕಿ ಸಣ್ಣವನಾದ ನನಗೆ ಮೊದಲು ಒಂದು ತಟ್ಟೆ ತೆಗೆದುಕೊಳ್ಳಲು ಹೇಳುತ್ತಿದ್ದಳು. ಈ ಪರಿಹಾರವೂ ಒಮ್ಮೆಮ್ಮೆ ಕೈಕೊಡುತ್ತಿತ್ತು. ಅಂತೂ ಕಿರಿಯನಾಗಿದ್ದಕ್ಕೆ ಮೊದಲು ಆರಿಸಿಕೊಳ್ಳುವ ಭಾಗ್ಯ ನನ್ನದಾಗಿರುತ್ತಿತ್ತು. ಕಿರಿಯನಾದ ನನಗೆ ಇದೊಂದು ಭಾಗ್ಯವೇ ಸರಿ.
ಅಡುಗೆ ಮನೆ /ಅವ್ವನ ಅಡುಗೆ
ಇದ್ದ ಅಲ್ಪ ಸಾಮಾನಿನಲ್ಲಿ ಅಡುಗೆ ಮಾಡುವ ಕಲೆ ಕಲಿಯುವದು ಅವ್ವನಿಗೆ ಅನಿವಾರ್ಯವಾಗಿತ್ತು. ನಾನಿದ್ದಾಗ ೫-೬ ಜನರಿಗೆ ದಿನವೂ ಅಡುಗೆ ಪದಾರ್ಥಗಳನ್ನು ಹೊಂದಿಸಿಕೊಂಡು ಅಡುಗೆ ಮಾಡಬೇಕಾಗಿತ್ತು . ೮ x ೮ ಅಡಿಯ ಮನೆಯೇ ಅಡುಗೆಮನೆ. ದೇವರ ಕಟ್ಟೆಗೂ ಅದರಲ್ಲೇ ಸ್ವಲ್ಪ ಜಾಗ ಕೊಡಬೇಕಾಗಿತ್ತು. ಮಣ್ಣಿನ ಒಲೆ, ಹಸಿ ಮತ್ತು ಸರಿಯಾಗಿರದ ಉರುವಲು, ಅಡುಗೆ ಮನೆ ಹೊಕ್ಕರೆ ಅವ್ವನೇ ಕಾಣದಷ್ಟು ಹೊಗೆಯಿಂದ ತುಂಬಿರುತ್ತಿದ್ದ ಜಾಗವದು. ಊದಿ ಊದಿ ಅವ್ವನೂ ನಿತ್ರಾಣಳಾಗುತ್ತಿದ್ದಳು . ಗ್ರೈಂಡರ್, ಮಿಕ್ಸೆರ್ , ಗ್ಯಾಸ್ ಹಾಗೂ ಕರೆಂಟು ಇರದ ಕಾಲವೆಂದರೆ ಈಗಿನ ಮಕ್ಕಳಿಗೆ ಊಹಿಸಲೂ ಸಾಧ್ಯವಿಲ್ಲ .
ಸರಿಯಾಗಿ ಸಾಮಾನಿರದ ,ಸಹಾಯವಿರದ, ಸಹಕಾರವಿರದ ಆ ಪರಿಸ್ಥಿತಿಯಲ್ಲಿ ೬-೮ ಜನಕ್ಕೆ ಹಬ್ಬದ ಅಡುಗೆ ಮಾಡುವದೆಂದರೆ ಅದೊಂದು ದೊಡ್ಡ ಯಜ್ಞ-ಯಾಗ ಎಂದೇ ಅನಿಸುತ್ತದೆ. ಹಬ್ಬದ ಸಂದರ್ಭಗಳಲ್ಲಿ ಹೋಳಿಗೆ, ಬೋಂಡಾ ಇರುತ್ತಿದ್ದವು. ನಮ್ಮ ಅವ್ವನ ವಿಶೇಷ ಅಡುಗೆಯೆಂದರೆ ಕುಚ್ಚಿದ ಕಡುಬು. ಸಾರು ಹುಳಿಗಿಂತ ಗೊಜ್ಜು , ಚಟ್ನಿಗಳೇ ಅವ್ವನ ಸ್ಪೆಸಿಯಾಲಿಟಿ . ದಿನ ನಿತ್ಯ ಹೇಗೋ ,ಹಬ್ಬದ ದಿನಗಳಲ್ಲಿ ಊಟ ಆಗಬೇಕೆಂದರೆ ಅದು ೨ ಗಂಟೆಯ ಹೊತ್ತಿಗೆ. ಮಧ್ಯಾಹ್ನ ಎಲ್ಲರೂ ಸಾಲಾಗಿ ಕುಳಿತು ಊಟ ಮಾಡುವಾಗಲೂ ಅವ್ವ ಒಬ್ಬಳೇ ಬಡಿಸುತ್ತಿದ್ದಳು. ಅದೆಷ್ಟು ವರ್ಷ ಹೀಗೆ ಪಾಂಗಿತವಾಗಿ ಮಾಡಿದ್ದರೂ ಎಂದೂ ಬೇಸರಿಸಿಕೊಂಡಿದ್ದನ್ನು ನಾನು ಕಂಡಿಲ್ಲ. ಆಗಿನ ಕಾಲದ ನೂರಕ್ಕೆ ನೂರು ಹೆಣ್ಣುಮಕ್ಕಳು ಇಂಥ ಅನೇಕಾನೇಕ ಪಡಿಪಾಟಲುಗಳನ್ನು ಪಟ್ಟಿದ್ದಾರೆ. ಆಗಿನ ಕಾಲದ ಈ ತೆರನಾದ ಕಷ್ಟಗಳಿಗೆ ಹೋಲಿಸಿದರೆ ನಾವೀಗ ನೋಡುತ್ತಿರುವ ನಗರ ಕೇಂದ್ರಿತ ಆಧುನಿಕ ಅಡುಗೆಮನೆಗಳು , ಇರುವ ಸೌಲಭ್ಯಗಳು , ಮನೆಯಲ್ಲಿನ ಜನರ ಸಂಖ್ಯೆ ಇವೆಲ್ಲ ಯಾವ ಹೋಲಿಕೆಗೂ ಸರಿದೂಗದು .
ಸರಿಸುಮಾರು ರಾತ್ರಿ ಎಂಟು ಗಂಟೆಯ ಹೊತ್ತಿಗೆ ಊಟ ಮಾಡುತ್ತಿದ್ದ ನೆನಪು. ಮಕ್ಕಳಾದ ನಾನು ಜನಿವಾರದವರ ಮನೆಯಲ್ಲಿ ಓದುವ ಶಾಸ್ತ್ರ ಮಾಡಿ ಬರುತ್ತಿದ್ದೆ. ಅಲ್ಲಿ ಯಾಕೆ ಓದುವದು ಎಂದರೆ ಅವರ ಮನೆಯಲ್ಲಿ ದೊಡ್ಡ ಕಂದೀಲಿನ ಬೆಳಕಿರುತ್ತಿತ್ತು. ಇದಲ್ಲದೆ ಅವರ ಮನೆಯಲ್ಲಿ ನನ್ನ ಓರಗೆಯ ಮಕ್ಕಳಿದ್ದರು. ಅವರ ಮನೆಯಲ್ಲಿದ್ದ ಭಾಗವ್ವಜ್ಜಿ ತನ್ನ ಮೊಮ್ಮಕ್ಕಳಿಗೆ ಓದಿಸುವದಕ್ಕೆ ಕುಮ್ಮಕ್ಕು ನೀಡುತ್ತಿದ್ದಳು . ಅವರು ಸ್ಥಿತಿವಂತರೂ, ಶಿಸ್ತಿನ ವ್ಯಕ್ತಿಗಳೂ ಆಗಿದ್ದ ಕುಟುಂಬವದು. ಬೆಳೆದ ಮಗ ಸೊಸೆ, ೪-೫ ಬರೀ ಗಂಡು ಮೊಮ್ಮಕ್ಕಳು ಇದ್ದರೂ ವ್ಯವಹಾರವೆಲ್ಲ ಆ ಆಜ್ಜಿಯದೇ ! ಅವರ ಮನೆಯಲ್ಲಿ ಒಂದು ಹೊಸ ಸೈಕಲ್ ಇತ್ತು. ಆದರೆ ಅದನ್ನು ಮುಟ್ಟಲು ಯಾರಿಗೂ ಅವಕಾಶವಿರಲಿಲ್ಲ - ಅವರ ಮಗನ ಹೊರತಾಗಿ . ಸಂಜೆಯ ಹೊತ್ತಿನಲ್ಲಿ ಅವ್ವ ಯಾರಾದರೂ ಹೆಂಗೆಳೆಯರೊಂದಿಗೆ ನಾನಾ ವಿಚಾರಗಳ ಬಗೆಗೆ ಮಾತನಾಡುತ್ತಿದ್ದರು. ನಮ್ಮ ಓದು, ಆಟ ಮುಗಿದರೂ ಅವ್ವನ ಮಾತು ಮುಗಿಯುತ್ತಿರಲಿಲ್ಲ .
ಎಂಟು ಗಂಟೆಯ ಹೊತ್ತಿಗೆ ಮನೆ ಬಂದ ಮೇಲೆ ; ಕೈಕಾಲು ತೊಳೆದು , ಅಂಗಿ ಬಿಚ್ಚಿ ಎಲ್ಲರೂ ತಮ್ಮ ತಮ್ಮ ತಟ್ಟೆ ಇಟ್ಟುಕೊಂಡು ಊಟಕ್ಕೆ ಕುಳಿತುಕೊಳ್ಳುತ್ತಿದ್ದೆವು. ಆಗಿನ ಕಟ್ಟಳೆಯಂತೆ ನಾವೆಲ್ಲರೂ ಶಂಕರಾಚಾರ್ಯ ವಿರಚಿತ ನಿತ್ಯಾನಂದಕರಿಯ ೨೪ ಶ್ಲೋಕಗಳನ್ನು ಹೇಳಿಯೇ ಊಟಮಾಡಬೇಕಿತ್ತು. ಅನ್ನಪೂರ್ಣೆ ಸದಾ ಪೂರ್ಣೇ ಶ್ಲೋಕವನ್ನು ಹೇಳಿದ ನಂತರ ಊಟ . ಪರಿಶಂಚನೆ ಇತ್ಯಾದಿ . ತಟ್ಟೆಯನ್ನು ಅಕ್ಕ ತೊಳೆಯುತ್ತಿದ್ದ ನೆನಪು.
ಹೊಸ ಗೊಂಡಬಾಳಿನ ವಾಸ
೧೯೬೯ರ ಆಸುಪಾಸಿನಲ್ಲಿ ನಮಗೆ ವಾಸದ ಮನೆಯ ತೊಂದರೆಯಾಯಿತು . ಅಪ್ಪನಿಗೆ ಟಿ ಬಿ ಕಾಯಿಲೆ ಉಲ್ಬಣಿಸಿತ್ತು. ವೈದ್ಯರು, ಆಗ ನಾವಿದ್ದ ಕೊತ್ತಲಚಾರ್ ಮಾಸ್ತರ್ ಮನೆಯಿಂದ - ತಂಪು ಹವೆ ವಾತಾವರಣವಿದ್ದ ಕಾರಣ ಬೇರೆ ಕಡೆ ಹೋಗಬೇಕಾಯಿತು . ಮನೆ ಸಿಗದಿದ್ದರಿಂದಲೋ ಏನೋ , ನಾವು ಹೊಸ ಗೊಂಡಬಾಳಿಗೆ ಸ್ಥಳಾಂತರಗೊಂಡೆವು . ಅಲ್ಲಿಂದ ನನ್ನ ಶಾಲೆ ಕೇವಲ ಅರ್ಧ ಕಿ ಮೀ ದೂರ.
ಇದೇ ಸಮಯದಲ್ಲಿ ದೊಡ್ಡ ಅಣ್ಣ ಮಾಡುವೆ ಮಾಡಿಕೊಳ್ಳಲೆಂದು ಊರಿಗೆ ಬಂದ ನೆನಪು. ಆಗ ಒಂದು ದಿನ ಅಪ್ಪ, ಅವ್ವ ಹಾಗೂ ಅಣ್ಣ ಇನ್ನೊಬ್ಬ ಊರಿನ ಹಿರಿಯನ ಜೊತೆಗೆ ಕೊಪ್ಪಳಕ್ಕೆ ಹೆಣ್ಣು ನೋಡಲು ಹೋಗುತ್ತಿದ್ದರು. ಅದೇನು ಬಂತೋ ನನಗೆ, ನಾನೂ ಬರುತ್ತೇನೆ ಎಂದು ಹಠ ಹಿಡಿದು ರಂಪ ಮಾಡಿದೆ . ಅವರೂ ಒತ್ತಡದಲ್ಲಿದ್ದರು. ಬುದ್ಧಿ ಹೇಳಿ ಸಮಾಧಾನಪಡಿಸಲು ನೋಡಿದರು . ನಾನೂ ಬರುತ್ತೇನೆ ಎಂಬ ಹಠ ಬಿಡಲಿಲ್ಲ . ಬಯ್ದು ,ಹೊಡೆದು ಹೇಳಿದರು. ಊಹೂ . ನಾನು ಬಂದೇ ಬರುತ್ತೇನೆ ಎಂದು ಹಠ ಹಿಡಿದೆ . ಅವರು ಬಿಟ್ಟು ಹೋಗಲು ಮನೆಯಿಂದ ಹೊರಟರು . ನಾನೂ ಬಿಡದೆ ಅವರ ಹಿಂದೆ ಓಡಿದೆ . ಆಗ ಅವರು ದಾರಿ ಕಾಣದೆ ಹೊಡೆದು , ಅಲ್ಲಿಯೇ ಇದ್ದ - ಅದೂ ನಮ್ಮ ಶಾಲೆಯ ಹತ್ತಿರವೇ ಇದ್ದ ಒಂದು ಮರಕ್ಕೆ ಕಟ್ಟಿ ಹಾಕಿ ಹೊರಟೇ ಹೋದರು. ಎಂದೂ ಹಠ ಮಾಡದ ನಾನು ಅಂದೇಕೆ ಅಷ್ಟು ಹಠ ಮಾಡಿನೋ ಇಂದಿಗೂ ತಿಳಿಯದಾಗಿದೆ.
ಸಾಹುಕಾರರ ಮನೆ
ನನಗೆ ತಿಳಿದಿರುವಂತೆ ಗೊಂಡಬಾಳಿಗೆ ನಮ್ಮ ಅಪ್ಪ ಹೋದ ದಿನದಿಂದಲೂ ಸಾಹುಕಾರರೆಂದು ನಾವು ಕರೆಯುತ್ತಿದ್ದ , ಅದು ನಿಜವೂ ಆಗಿದ್ದ ' ಕಪ್ಪತ್ತೆಪ್ಪ' ಎಂಬ ವೈಶ್ಯರ ಮನೆಯ ಕಾಯಂ ಪುರೋಹಿತ. ನಾವು ೧೯೭೧ರ ವರೆಗೂ ಅಂದರೆ ಗೊಂಡಬಾಳು ಬಿಟ್ಟು ಬರುವವರೆಗೂ ಇದು ಮುಂದುವರೆದಿತ್ತು.
ಅನೇಕ ದಶಕಗಳ ಹಿಂದೆ ಅವರು ಪ್ರಖ್ಯಾತ ವರ್ತಕರಾಗಿದ್ದರಂತೆ. ಅವರು ಆಗ ಗಳಿಸಿದ ಶ್ರೀಮಂತಿಕೆ ಇನ್ನೂ ಉಳಿದಿತ್ತು. ಆದರೂ ಅದರ ವೈಭವ ಕಣ್ಮರೆಯಾಗುತ್ತ ಸಾಗಿತ್ತು. ಡ್ಯಾಮ್ ಕಟ್ಟುವ ಕಾಲಕ್ಕೂ ಮುಂಚೆ ತುಂಗಭದ್ರಾ ಬರೀ ನದಿಯಾಗಿತ್ತಷ್ಟೆ. ಆಗ ನಮ್ಮ ಊರು ಇನ್ನೂ ದ್ವೀಪವಾಗಿರಲಿಲ್ಲ . ೧೯೬೫ರ ಹೊತ್ತಿಗೂ ಅವರಿಗೆ ನೂರಾರು ಎಕರೆ ಜಮೀನು , ನೂರಾರು ದನಕರುಗಳಿರುವ ಒಕ್ಕಲತನವೂ ಅವರಿಗೆ ಇತ್ತು. ಇದಕ್ಕೂ ಮೊದಲು ಅವರು ಇನ್ನೂ ವೈಭವೋಪೇತವಾಗಿ ಬಾಳಿದ್ದರು ಎಂದು ಅಪ್ಪ ಅವ್ವ ಹಾಗೂ ಊರಿನ ಜನ ಮಾತಾಡಿಕೊಳ್ಳುತ್ತಿದ್ದರು. ಕಾಲದ ಮಹಿಮೆ. ದಿನಕಳೆದಂತೆ ಅವರ ವೈಭವ ಇಳಿಮುಖವಾಗಿ ನಡೆದಿತ್ತು. ವ್ಯಾಪಾರ ವ್ಯವಹಾರಗಳೆಲ್ಲ ಬಂದಾಗಿ ಕೇವಲ ಜಮೀನು, ಒಕ್ಕಲತನಗಳು ಮಾತ್ರ ಉಳಿದಿದ್ದವು.
ನಮ್ಮ ಊರಿನಲ್ಲಿಯೇ ಅವರಿಗೆ ಅಂಜಾಜು ೧೫-೨೦ ಮನೆಗಳಿದ್ದವು. ತಾವಿರಲು ಒಂದು , ಅಂಡಗಿ ಮನೆಯೆಂಬುದು ಇನ್ನೊಂದು, ಅರಳಿ ಪೆಂಡಿಗಳನ್ನು ಹಾಕಲು ಮುಗುದೊಂದು , ದಾನ ಕಟ್ಟು ಮತ್ತೊಂದು ಹೀಗೆ. ಅದರಂತೆ ಇದ್ದ ಇನ್ನೊಂದು ಅಂತಹ ಒಂದು ಹಳೆಯ ಮನೆಯಲ್ಲಿ ನಾವಿದ್ದೆವು. ಇದರ ವಿಶೇಷ ಏನೆಂದರೆ ನದಿ ನೀರಿನಿಂದಾಗಿ ಮನೆಯೆಲ್ಲ ತಂಪು ಅಡರಿರುತ್ತಿತ್ತು . ಅದು ಎಷ್ಟರ ಮಾತ್ತಿಗೆ ಎಂದರೆ ಮಣ್ಣಿನ ನೆಲದ ಮನೆಯಾದ್ದರಿಂದ ನಮ್ಮ ಎಲ್ಲರ ಕಾಲಿಗೆ ಸುಮಾರು ೨-೩ಮಿ ಮೀ ನಷ್ಟು ಕಾಲಿಗೆ ಕಪ್ಪು ಜಿಗುಟು ಅಡರಿರುತ್ತಿತ್ತು. ಅದನ್ನು ಕಿತ್ತಲು ನಾವು ಅತ್ಯಾಧುನಿಕ ಆಯುಧವಾದ ಚುಚ್ಚುಗವನ್ನು ಬಳಸಲೇಬೇಕಾಗಿತ್ತು. ಈ ತೆರನಾದ ತಂಪು ಹವೆ , ಸರಿಯಾದ ಹೊತ್ತಿಗೆ ಆಹಾರ ತೆಗೆದುಕೊಳ್ಳದೇ ಇರುವುದು ಹಾಗೂ ಪೌಷ್ಠಿಕ ಆಹಾರದ ಕೊರತೆಯಿಂದಾಗಿ ಕೊನೆಯ ಕಾಲದಲ್ಲಿ ಅಪ್ಪ ಟಿ ಬಿ ಕಾಯಿಲೆಯಿಂದ ನರಳಬೇಕಾಗಿ ಬಂತು ಎಂದು ನನ್ನ ಅನಿಸಿಕೆ.
ಇದಲ್ಲದೆ ನಮ್ಮ ಸಾಹುಕಾರರಿಗೆ ಊರ ಹೊರಗೆ ಅಂದರೆ ಸುಮಾರು ಅರ್ಧ ಕಿ ಮೀ ದೂರದಲ್ಲಿ ಒಂದು ಭವ್ಯವಾದ ಬಂಗಲೆ ಇತ್ತು. ಅದು ಕಲ್ಲಿನ ಕಟ್ಟಡ. ೬೦೦ x ೬೦೦ ಅಡಿ ಅಳತೆಯ ಸೈಟು ಇರಬಹುದು . ಅಕ್ಕಪಕ್ಕದಲ್ಲಿ ಯಾವ ಮನೆಯೂ ಇರಲಿಲ್ಲ. ತುಂಬಾ ಮಜಬೂತಾದ ಮನೆ ಅದು. ಅದ್ಯಾವ ಕಾರಣಕ್ಕಾಗಿಯೋ ಆ ಮನೆಯಲ್ಲಿ ಯಾರೂ ವಾಸವಿರಲಿಲ್ಲ . ನನಗೆ ತಿಳಿದ ಮಟ್ಟಿಗೆ ಅಲ್ಲಿ ರೈತಾಪಿ ಕೆಲಸದ ಸಾಮಾನುಗಳನ್ನು ಹಾಗೂ ದವಸ ಧಾನ್ಯಗಳನ್ನು ಮಾತ್ರ ಇಟ್ಟಿರುತ್ತಿದ್ದರು. ನಾವು ಗೊಂಡಬಾಳು ಬಿಟ್ಟ ಅನೇಕ ವರ್ಷಗಳ ನಂತರ ಅವರು ಅಣ್ಣ ತಮ್ಮಂದಿರು ಭಾಗವಾದಾಗ ಒಬ್ಬ ಮಗ ಅಲ್ಲಿಗೆ ಬಂದು ವಾಸವಿದ್ದ ಎಂದು ಕೇಳಿದ ನೆನಪು.
ಪ್ರತಿವಾರವೂ ಅಪ್ಪ ಅವರ ಮನೆಯಲ್ಲಿ ದೇವರ ಪೂಜೆ ಮಾಡಬೇಕಾಗಿತ್ತು. ಹಾಗೂ ದಸರಾ ಮತ್ತು ಇತರೆ ಹಬ್ಬ ಹರಿದಿನಗಳಲ್ಲಿ ಅವರ ಮನೆಯಲ್ಲಿದ್ದ ಹತ್ತಾರು ಬಾಗಿಲುಗಳನ್ನು ಶೃಂಗರಿಸಿ , ತಳಿರು ತೋರಣಗಳನ್ನು ಕಟ್ಟಬೇಕಾಗಿತ್ತು. ಅಂತಹ ಸಂದರ್ಭಗಳಲ್ಲಿ ನಾವೂ ಅವರ ಜೊತೆಗೆ ಹೋಗುತ್ತಿದ್ದೆವು. ಆಗ ನಮ್ಮ ತಂದೆಯ ವಾರದ ಸಂಬಳ ೫ ರೂಪಾಯಿಯಾಗಿತ್ತು. ಕೊನೆ ಕೊನೆಗೆ ಅದನ್ನು ಕೊಡಲು ಅವರು ಸತಾಯಿಸುತ್ತಿದ್ದರು . ಅದರ ವಿವರಣೆ ನಂತರ.
ರಜಾಕಾರರು
ನಮ್ಮ ಊರು ಹೈದರಾಬಾದ್ ನಿಜಾಮನ ಆಡಳಿತಕ್ಕೆ ಸೇರಿತ್ತು ಎಂದು ನಾನೀಗಾಗಲೇ ಹೇಳಿದ್ದೇನೆ. ಸ್ವಾತಂತ್ರ್ಯ ಕಾಲದ ಹೊತ್ತಿಗೆ ನಡೆದ ರಜಾಕಾರರ ಬಗೆಗೆ ಅವ್ವ ರಸವತ್ತಾಗಿ ವರ್ಣಿಸುತ್ತಿದ್ದಳು. ಅದನ್ನು ಅನೇಕ ಸಲ ಹೇಳಿದ್ದರೂ; ಕೇಳಿದ್ದರೂ ಅವ್ವನ ಬಾಯಿಂದ ಮತ್ತೆ ಮತ್ತೆ ಕೇಳುವುದು ನಮಗೆ ಇಷ್ಟವಾಗುತ್ತಿತ್ತು. ಅದರ ಸರಳ ವಿವರಣೆ ಹೀಗಿದೆ.
ಅವ್ವ ಹೇಳುತ್ತಿದ್ದ ಕಾಲದಲ್ಲಿ ಸಾಹುಕಾರರ ಮನೆಯ ಹಿರಿಯ ಕಪ್ಪತ್ತೆಪ್ಪ ಇನ್ನೂ ಬದುಕಿದ್ದರಂತೆ . ಅದು ೧೯೪೬-೪೭ರ ಕಾಲವಿರಬೇಕು . ಭಾರತಕ್ಕೆ ಸೇರಲು ಹೈದರಾಬಾದ್ ನಿಜಾಮ ಪ್ರತಿರೋಧ ತೋರುತ್ತಿದ್ದ. ಆಗ ಅಬ್ದುಲ್ ರಜಾಕ್ ಎಂಬ ಆತನ ಬಂಟನ ನೇತೃತ್ವದಲ್ಲಿ ರಜಾಕಾರರು ಸಿಕ್ಕ ಸಿಕ್ಕ ಊರನ್ನು ದರೋಡೆ ಮಾಡುತ್ತಿದ್ದರಂತೆ ಹಾಗೂ ಅತ್ಯಾಚಾರಗಳು ನಡೆಯುತ್ತಿದ್ದವಂತೆ . ಗುಂಪು ಗುಂಪಾಗಿ ಅಬ್ದುಲ್ ರಜಾಕನ ಕಡೆಯವರು ಆಯುಧ ಹಿಡಿದು ನುಗ್ಗಿ ಹಳ್ಳಿಗಳ ದರೋಡೆ ಮಾಡುತ್ತಿದ್ದರಂತೆ .
ಇಂತಹ ಒಂದು ಸಂದರ್ಭ, ಅವರು ನಮ್ಮ ಊರಿಗೂ ಬರುವ ಸೂಚನೆ ಬಂತು. ಊರ ಜನರೆಲ್ಲಾ ತಮ್ಮೆಲ್ಲ ಅಮೂಲ್ಯ ವಸ್ತುಗಳನ್ನು ಬಾವಿಗೆ ಹಾಕಿದ್ದರಂತೆ. ನಂತರ ನಮ್ಮ ಊರಿನ ಹಿರಿಯ ಕಪ್ಪತ್ತೆಪ್ಪ ಸಾಹುಕಾರ ರಜಾಕಾರರನ್ನು ಊರ ಹೊರಗೇ ತಡೆದು ನಿಲ್ಲಿಸಿ ಅವರು ಕೇಳಿದಷ್ಟು ಹಣ ಮತ್ತು ಬಂಗಾರವನ್ನು ಸೇರಿನಲ್ಲಿ ಅಳೆದು ಕೊಟ್ಟು ಊರಿಗೆ ಅವರು ನುಗ್ಗದಂತೆ ತಡೆ ಹಿಡಿದಿದ್ದನಂತೆ. ಸಾಹುಕಾರರು ಊರ ಮಾನ ಕಾಪಾಡಿದರು ಎಂದು ಜನರು ಕೊಂಡಾಡುತ್ತಿದ್ದರು. ನಂತರ ಹೈದರಾಬಾದ್ ಕರ್ನಾಟಕದಾದ್ಯಂತ ರಜಾಕಾರರ ಹಾವಳಿ ನಡೆದುದನ್ನು ಇತಿಹಾಸದ ಪುಸ್ತಕಗಳಲ್ಲಿ ಓದಿದ ನಾನು ಅವ್ವನ ವಿವರಣೆಯ ಬಗೆಗೆ ಸಹಮತ ವ್ಯಕ್ತಪಡಿಸಿದ್ದೆ.
ಹೋಟೆಲು-ಚಹಾದಂಗಡಿ
ಹಳೆಯ ಗೊಂಡಬಾಳಿನ ಮುಖ್ಯ ಬೀದಿಯ ಒಂದು ಹಳೆಯ ಮನೆಯಲ್ಲಿ ಒಂದು ಹೋಟೆಲಿತ್ತು. ಅದಕ್ಕೆ ನಮ್ಮೂರಿನ ಭಾಷೆಯಲ್ಲಿ ಚಹಾದಂಗಡಿ ಎಂದು ಹೇಳುತ್ತಿದ್ದೆವು. ಆಗ ನಮ್ಮ ಕಡೆ ಕೇವಲ ಚಹಾ ಮಾತ್ರ ಸಿಗುತ್ತಿತ್ತು ಕಾಫಿ ತುಂಬ ಅಪರೂಪ . ಅಲ್ಲಿನ ವಿಶೇಷ ತಿಂಡಿಗಳೆಂದರೆ ಮಂಡಕ್ಕಿ ವಗ್ಗರಣೆ -( ಈಗಲೂ ನಮ್ಮ ಮನೆಯಲ್ಲಿ ವಾರಕ್ಕೊಮ್ಮೆ ಅದರ ರುಚಿ ಸವಿಯುವ ಅವಕಾಶವಿದೆ), ಮೆಣಸಿನಕಾಯಿ ಬೋಂಡಾ ಮತ್ತು ಚಹಾ ಸಿಗುತ್ತಿದ್ದವು. ಮಂಡಕ್ಕಿಯ ವಗ್ಗರಣೆ ಜೊತೆಗೆ ಒಂದೆರಡು ಕರಿದ ಮೆಣಸಿನಕಾಯಿಯನ್ನು ಒಂದು ಹಳೆಯ ರದ್ದಿ ಕಾಗದದಲ್ಲಿ ಹಾಕಿ ಕೊಡುತ್ತಿದ್ದರು. ನಂತರ ಚಹಾ. ಹರಿಜನರಿಗೆ ಒಳಗೆ ಪ್ರವೇಶವಿರಲಿಲ್ಲ. ಭ್ರಾಹ್ಮಣರ ಹುಡುಗರಾದ ನಾವು ಹೋಟೆಲಿಗೆ ಹೋಗುತ್ತಿರಲಿಲ್ಲ. ಅಪರೂಪಕ್ಕೊಮ್ಮೆ ನಮ್ಮ ಸ್ನೇಹಿತರ ಜೊತೆಗೆ ಹೋಗಿ ಅವರ ಅಪ್ಪಂದಿರನ್ನು ಕರೆತರಲು ಹೋದ ನೆನಪು. ಇದರಿಂದ ಇಷ್ಟು ಮಾಹಿತಿ . ಚಹಾದಂಗಡಿಯೆಂದರೆ ದಿನದ ದುಡಿಮೆಯ ನಂತರ ಊರಿನ ರೈತಾಪಿ ವರ್ಗ ಒಂದೆಡೆ ಸೇರುವ ಸ್ಥಳ . ತಿಂಡಿ ಚಹಾ ಕುಡಿಯದವರೂ ಅಲ್ಲಿ ನೆರೆದಿರುತ್ತಿದ್ದರು- ಕಾರಣ ಮಾತು, ವ್ಯವಹಾರ , ಕೃಷಿ ಮಾಹಿತಿ ವಿನಿಮಯ ಮಾಡಿಕೊಳ್ಳಲು. ಇಂತಹ ಅನೇಕ ಸಲ ಊರಿನ ರಾಜಕೀಯವೂ ಅವರ ಮಾತುಗಳ ಮಧ್ಯೆ ಬಂದು ಸೇರುತ್ತಿರಬಹುದು.
ಒಂದು-ಒಂದೂವರೆ ಅಡಿ ಎತ್ತರದ ಎರಡು ಕಲ್ಲುಗಳ ಮೇಲೆ ಒಂದು ಮರದ ಹಲಗೆಯನ್ನು ಇಟ್ಟಿರುತ್ತಿದ್ದರು. ಅದುವೇ ಗಿರಾಕಿಗಳು ಕುಳಿತುಕೊಳ್ಳುವ ಸ್ಥಳ! ಅಲ್ಲಿ ತಯಾರಾಗುತ್ತಿದ್ದ ಬಿಸಿ ಬಿಸಿ ಮಂಡಕ್ಕಿ ವಗ್ಗರಣೆ , ಮೆಣಸಿನಕಾಯಿ ಬೋಂಡಾ ಮತ್ತು ಚಹಾ ಈಗಲೂ ಬಾಯಲ್ಲಿ ನೀರು ತರಿಸುತ್ತವೆ.
ಬ್ರಾಹ್ಮಣ ಜಾತಿಯ ಹಾಗೂ ಊರಿನ ಪುರೋಹಿತರ ಮಕ್ಕಳಾದ ನಾವು ಹೋಟೆಲ್ಲಿಗೆ ಹೋಗುತ್ತಿರಲಿಲ್ಲ- ಯಾರಾದರೂ ನೋಡಿದರೆ ಎಂಬ ಭಯ ! ಆದರೂ ಒಂದೆರಡು ಬಾರಿ ಸಹಪಾಠಿಗಳ ಜೊತೆಗೆ ಹೋಗಿದ್ದಾಗ ಮತ್ತು ಒಂದೆರಡು ಬಾರಿ ತಿಂದಿದ್ದರ ವಿವರಣೆ ಮೇಲಿನಂತಿದೆ .
ಇದಲ್ಲದೆ ನಮ್ಮೂರಿನಲ್ಲಿ ಡಾಣಿ ಕೊಟ್ರಪ್ಪನ ಹೋಟೆಲ್ ಎಂಬ ಹೋಟೆಲ್ ಮನೆಯೂ ಇತ್ತು. ನನಗೆ ನೆನಪಿರುವಂತೆ ಅದು ಒಂದು ಪಳಯುಳಿಕೆಯಂತಹ ಮುರುಕಲು ಮನೆಯಲ್ಲಿ ನಡೆಯುತ್ತಿತ್ತು. ಅದರ ವಿಶೇಷವೆಂದರೆ ೧೦ ಪೈಸೆಗೆ ನೀಡುತ್ತಿದ್ದ ೩ ಪೂರಿಗಳು - ಅವು ಮೈದಾ ಮತ್ತು ಗೋದಿ ಹಿಟ್ಟಿನ ಮಿಶ್ರಣದಿಂದ ಮಾಡಿದ್ದವಾಗಿರಬೇಕು. ಅದರ ಮೇಲೆ ಹಾಕುತ್ತಿದ್ದ ಸಾಗುವಿನಂತಹ ಈರುಳ್ಳಿ ಹಾಕಿ ಮಾಡಿದ ( ಆಲೂಗಡ್ಡೆ ಇರುತ್ತಿತ್ತೋ ಇಲ್ಲವೋ ನೆನಪಿಲ್ಲ) ಕಡಲೆ ಹಿಟ್ಟಿನ ಸಾಗೂ . ಅಹ ಅದರ ರುಚಿ ಇನ್ನೂ ಬೇರೆಲ್ಲೂ ಮರುಕಳಿಸಿಲ್ಲ. ಅದು ಬಾಲ್ಯದ ಸವಿ ನೆನಪಿನ ಮಹಿಮೆಯೋ ನಾನರಿಯೆ ! ಅದರ ಬೇಗೆಗೆ ಈಗ ಮನೆಯಲ್ಲಿ ಹೇಳಿದಾಗ ಬೈಗಳ ಮುನಿಸು ಹಾಗೂ ಉಚಿತ ಸಲಹೆ - ಅದೇ ತರಹ ರುಚಿ ಬೇಕಿದ್ದರೆ ಅಲ್ಲಿಗೇ ಹೋಗಿ ಎಂದು. ಆದರೆ ಹೋಗುವದಾದರೂ ಎಲ್ಲಿಗೆ? ಡಾಣಿ ಕೊಟ್ರಪ್ಪ ಎಂದೋ ಸತ್ತು ಸ್ವರ್ಗಸ್ಥನಾಗಿದ್ದಾನೆ .
ಇರಲಿ ಎಲ್ಲ ನೆನಪುಗಳನ್ನು ಬರೆಯುತ್ತ ಹೋದರೆ ನಾನು ಅಲ್ಲಿ ಕಳೆದ ಮತ್ತೆ ಏಳು ವರ್ಷಗಳೇ ಬೇಕಾಗಬಹುದು. !
ಗ್ರಾಮಪಂಚಾಯಿತಿ
ನೆಹರು ಆಡಳಿತದ ಕೃಪೆ . ನಮ್ಮೂರಿನಲ್ಲೂ ಗ್ರಾಮಪಂಚಾಯಿತಿ ಇತ್ತು. ಅದು ಊರಿನ ಮುಖ್ಯ ಬೀದಿಯ ಮೇಲೆ ವಿವರಿಸಿದ ಹೋಟೆಲ್ ಎದುರಿಗೆ ಅದರ ಕಚೇರಿ ಇತ್ತು. ಸಾಯಂಕಾಲವಾದರೆ ಪಂಚಾಯಿತಿವತಿಯಿಂದ ಊರಿನ ಕಂಬಗಳಲ್ಲಿದ್ದ ಚಿಮಣಿ ಎಣ್ಣೆಯ ದೀಪ ಹಚ್ಚಲಾಗುತ್ತಿತ್ತು. ಯಾಕೆಂದರೆ ಊರಿಗೆ ಆಗಿನ್ನೂ ವಿದ್ಯುತ್ ಸಂಪರ್ಕವಿರಲಿಲ್ಲ . ಅದೇ ಕೆಲಸಕ್ಕಾಗಿ ಒಬ್ಬ ವ್ಯಕ್ತಿಯನ್ನು ನೇಮಿಸಲಾಗಿತ್ತು.
ಹೊಸ ಗೊಂಡಬಾಳು ರಚನೆಯಾದಾಗ ಅಲ್ಲಿ ಹರಿಜನರಿಗಾಗಿಯೇ ಒಂದು ಕೇರಿ ಇತ್ತು. ಆದರೆ ಹಳೆಯ ಊರಿನಲ್ಲಿ ದಾಸರು ಇದ್ದ ಒಂದು ಪ್ರದೇಶದಲ್ಲಿ ಇತರ ಅಸ್ಪೃಶ್ಯರು ವಾಸವಿದ್ದರು. ಅದರ ಮುಂದಿನ ಜಾಗದಲ್ಲಿ ಚಲುವಾದಿಗಳು ವಾಸವಿದ್ದರು. ಕುರುಬರು ಓಣಿಯೇ ಬೇರೆ ಇತ್ತು. ಆರ್ಯರು ಎಂದು ಕರೆಯಲಾಗುತ್ತಿದ್ದ ಜನರ ವಾಸಸ್ಥಳವು ಓಣಿಯೇ ಬೇರೆ ಇತ್ತು. ನಾವು ಊರಿನ ಸಾಹುಕಾರರಿಗೆ ಸೇರಿದ್ದ ಜನಿವಾರದವರೆಂದು ಕರೆಯಲಾಗುತ್ತಿದ್ದ, ದೇವಾಂಗದವರು ವಾಸಿಸುತ್ತಿದ್ದ ಓಣಿಯಲ್ಲಿ ವಾಸವಿದ್ದೆವು. ಅದು ಹೊತ್ತು ತುಂಬುವ ಬಾವಿಯೆಂದು ಕರೆಯುತ್ತಿದ್ದುದರ ಪಕ್ಕದಲ್ಲಿಯೇ ಇತ್ತು. ಬಾವಿಯ ಕಪಲಿಯ ಭಾಗದ ಕಡೆ ಗೀಜಗನ ಹಕ್ಕಿಗಳು ಕಲಾತ್ಮಕವಾಗಿ ಗೂಡು ಕಟ್ಟುತ್ತಿದ್ದವು. ಅದನ್ನು ನೋಡುವುದೇ ಒಂದು ಸೌಭಾಗ್ಯವಾಗಿದ್ದರೂ , ಅದು ನಮ್ಮ ಮನೆಯ ಮುಂದೆಯೇ ದಿನದ ೨೪ ಗಂಟೆಯೂ ಇರುತ್ತಿದ್ದುದರಿಂದ ಅದಕ್ಕೆ ಬೆಲೆಯೇ ಇಲ್ಲದಂತಾಗಿತ್ತು. ಅವುಗಳನ್ನು ನೋಡಲು - ತೋರಿಸಲು ಅದೆಲ್ಲಿಂದಲೋ ಕಾಲೇಜು ಹುಡುಗರಂತೆ ಕಾಣುವ ತಂಡಗಳು ಆಗಾಗ ಬರುತ್ತಿದ್ದವು. ದಿನವೂ ನೋಡುತ್ತಿದ್ದ ನಾವು ಅವನ್ನು ನೋಡಿ ನೋಡಿ ಅದಕ್ಕೆ ಬೆಲೆ ಇಲ್ಲದಂತಾಗಿ - ಅದನ್ನೇನು ನೋಡಲು ದೂರದೂರಿನಿಂದ ಬರುತ್ತಾರೋ ಎಂದು ಅವರ ಬಗೆಗೆ ' ಕೆಲಸವಿಲ್ಲದವರು' ಎಂಬಂತೆ ಮಾತಾಡಿಕೊಳ್ಳುತ್ತಿದ್ದೆವು. !
ಆಗಿನ ನಿಯಮದಂತೆ ಗ್ರಾಮಪಂಚಾಯಿತಿ ಸದಸ್ಯರಲ್ಲಿ ಹರಿಜನ ಮತ್ತು ಮಹಿಳಾ ಸದಸ್ಯರಿರಬೇಕಾಗಿತ್ತು. ಅವರಿದ್ದರು ಕೂಡ - ಬರಿ ನೆಪಕ್ಕೆ ಮಾತ್ರ. ಬೇರೆಲ್ಲ ಸದಸ್ಯರು ಕುರ್ಚಿಯ ಮೇಲೆ ಕುಳುತಿರುತ್ತಿದ್ದರೆ , ಹರಿಜನ ಮತ್ತು ಮಹಿಳಾ ಸದಸ್ಯರು ನೆಲದ ಮೇಲೆ ಕುಳಿತಿರುತ್ತಿದ್ದ ನೆನಪು.
ವಿಪರ್ಯಾಸವೆಂದರೆ , ಅಕ್ಷರಸ್ಥರಾಗಿದ್ದರೂ ಅಪ್ಪನಿಗೆ ಊರಿನ ಸಾಂಸ್ಕೃತಿಕ ಮತ್ತು ರಾಜಕೀಯ ಸಂಗತಿಗಳಲ್ಲಿ ಯಾವ ಆಸಕ್ತಿಯೂ ಇರಲಿಲ್ಲ. ಊರಿನಲ್ಲಿ ನಡೆದ ನಾಟಕ , ಬಯಲಾಟ , ಇನ್ನಿತರ ಯಾವದೇ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದಿಲ್ಲ. ಕಾರಣ ತಿಳಿಯದು. ಅವರ ಸ್ವಭಾವವೇ ಕಾರಣವೇ ನಾನರಿಯೆ.
ವೈದ್ಯಕೀಯ ವ್ಯವಸ್ಥೆ
ಅಂದಿನ ಎಲ್ಲ ಊರುಗಳಂತೆ ನಮ್ಮ ಊರಿನಲ್ಲಿಯೂ ಯಾವುದೇ ವೈದ್ಯಕೀಯ ಸೌಲಭ್ಯಗಳಿರಲಿಲ್ಲ . ಚಿಕ್ಕವರಾಗಿದ್ದಾಗ ಯಾವುದಾದರೂ ಕಾಯಿಲೆಗಳು ಬಂದರೆ , ಅಥವಾ ಬಿದ್ದು ಗಾಯಗಳಾದರೆ ಮನೆಯುಪಚಾರವೇ ನಡೆಯುತ್ತಿತ್ತು. ಗಾಯಕ್ಕೆ ಅರಿಶಿನ ಪುಡಿ ಮತ್ತು ನೆಗಡಿ ಕೆಮ್ಮು ಶೀತಗಳಿಗೆ ಬೆಳ್ಳುಳ್ಳಿಗಳು ರಾಮ ಬಾಣಗಳಂತೆ ಕೆಲಸ ಮಾಡುತ್ತಿದ್ದವು. ಒಂದು ವೇಳೆ ಬಗ್ಗದ ಕಾಯಿಲೆಗಳು ಬಂದಾಗ ನಾವು ಆಶ್ರಯಿಸುತ್ತಿದ್ದುದು ಊರಿನಲ್ಲಿಯೇ ಇದ್ದ ಯುನಾನಿ ಪದ್ಧತಿಯ ಹಕೀಮರನ್ನು . ಅನೇಕಾನೇಕ ಸಂದರ್ಭಗಳಲ್ಲಿ ನಾವೂ , ಊರಿನ ಜನರೂ ಹಕೀಮರಲ್ಲಿ ಔಷಧಿ ಪಡೆದು ಗುಣಪಡಿಸಿಕೊಂಡಿದ್ದೇವೆ. ಅದರಲ್ಲೂ ಅವರು ಕೊಡುತ್ತಿದ್ದ ' ಮುಲಾಮು ' ಹೆಚ್ಚು ಪರಿಣಾಮಕಾರಿಯೆಂದು ಪ್ರಸಿದ್ಧಿ ಪಡೆದಿತ್ತು. ಅಂದಿನ ಕಾರಣದಿಂದಾಗಿ ನನಗೀಗಲೂ ಯುನಾನಿ ಪದ್ದತಿಯ ಬಗೆಗೆ ವಿಶೇಷ ಗೌರವವಿದೆ.
ಅಪ್ಪನಿಗೆ ಟಿಬಿ ಕಾಯಿಲೆ ಬಂದ ನಂತರ ಅವರಿಗೆ ಆಗಾಗ ಇಂಜೆಕ್ಷನ್ ಕೊಡಿಸಬೇಕಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಆಗ ತಾನೇ ನಮ್ಮೂರಿಗೆ ಹೊಸದಾಗಿ ಬಂದಿದ್ದ ಒಬ್ಬ ಡಾಕ್ಟರ್ ಹತ್ತಿರ ಹೋಗಬೇಕಾಗುತ್ತಿತ್ತು. ಅವರು ಕೆಲವೊಮ್ಮೆ ನಮ್ಮ ಮನೆಗೂ ಬಂದು ಔಷಧಿ ಕೊಡುತ್ತಿದ್ದರು. ಅವರು ದಾಸರ ಅಂದರೆ ಹರಿಜನರ ಜಾತಿಗೆ ಸೇರಿದವರಾಗಿದ್ದರು. ಅದರಿಂದ ಅಪ್ಪನಿಗೆ ಸ್ವಲ್ಪ ಮುಜುಗರವಾಗುತ್ತಿತ್ತು. ಆದರೆ ವೈದ್ಯ ಮಾತ್ರ ವಿನಯದಿಂದಲೂ ತಮಾಷೆಯಿಂದಲೂ ಮಾತಾಡಿ , ಉಪಚಾರ ನೀಡಿ “ಸ್ವಾಮಿ ಆಮೇಲೆ ಬೇಕಾದರೆ ಸ್ನಾನ ಮಾಡಿ” ಎಂದು ಸಲಹೆ ನೀಡುತ್ತಿದ್ದ. ಅಬ್ಬಾ ! ಅವರು ಅಂದು ತೋರಿದ ಸೌಜನ್ಯತೆ ಹಾಗೂ ತಮಾಷೆಯಿಂದ ಹೇಳಿದ್ದು ಇಂದಿಗೂ ನನ್ನ ನೆನಪಿನಲ್ಲುಳಿದಿದೆ.
ಕೆಲ ವರ್ಷಗಳ ನಂತರ , ಅಂದರೆ ನಾನು ೫-೬ ನೆಯ ತರಗತಿಯಲ್ಲಿದ್ದಾಗ ನನ್ನ ಬೆನ್ನ ಮೇಲೆ ಒಂದು ಹುಣ್ಣಾಯಿತು. ಅದನ್ನು ವಾಸಿ ಮಾಡುವುದು ನಮ್ಮ ಊರಿನ ಹಕೀಮರಿಗೂ ಸಾಧ್ಯವಾಗಲಿಲ್ಲ. ಮುಂದಿನ ಪ್ರಯತ್ನವೆಂಬಂತೆ ಯಾರದೋ ಸಲಹೆಯ ಮೇರೆಗೆ ಸಿಂದೋಗಿಯ ಆಯುರ್ವೇದ ವೈದ್ಯನ ಬಳಿಗೆ ಅವ್ವ ಅಪ್ಪನೊಂದಿಗೆ ಹೋದೆವು. ಅವರಿಂದಲೂ ನನ್ನ ಹುಣ್ಣು ಮತ್ತು ನೋವಿಗೆ ಪರಿಹಾರ ಸಿಗಲಿಲ್ಲ. ನನ್ನ ವೇದನೆ ಯಾತನೆ ಮುಂದುವರಿಯಿತು. ಮುಂದಿನ ದಾರಿ ಎಂಬಂತೆ ರಾಮಚಂದ್ರ ರಾವ್ ಮಾಸ್ತರರ ಸಲಹೆಯಂತೆ ಹುಬ್ಬಳ್ಳಿಯ ಕೆ ಎಂ ಸಿ ಆಸ್ಪತ್ರೆಗೆ ಹೋಗುವುದೆಂದು ತೀರ್ಮಾನವಾಯಿತು. ಆದರೆ ಹೋಗುವುದು ಹೇಗೆ? ಖರ್ಚಿಗೆ ಏನು ಮಾಡುವುದು? ಎಂಬ ಸಮಸ್ಯೆಗಳು ಕಾಯಿಲೆಯಷ್ಟೇ ಅಪ್ಪ ಅವ್ವರನ್ನು ಕಾಡಿದವು.
ಅಂತೂ ಒಂದು ದಿನ ರೈಲಿನಲ್ಲಿ ಅಲ್ಲಿಗೆ ಹೋದೆವು. ಆಗಿನ ಕಾಲಕ್ಕೂ ಅದು ಕೆಎಂಸಿ ನಮ್ಮ ಸುತ್ತ ಮುತ್ತಲಿನ ಪ್ರದೇಶಕ್ಕೆ ದೊಡ್ಡ ಆಸ್ಪತ್ರೆಯಾಗಿತ್ತು. ಆಸ್ಪತ್ರೆಯ ಯಾವುದೋ ಒಂದು ಅಂತಸ್ತಿನಲ್ಲಿ ಒಂದು ಮಂಚದ ಮೇಲೆ ನನ್ನನ್ನು ಮಲಗಿಸಿದರು. ದೊಡ್ಡ ದೊಡ್ಡ ಡಾಕ್ಟರರು ಅವರೊಂದಿಗೆ ಒಂದು ರಾಶಿ ಎನ್ನಬಹುದಾದಷ್ಟು ವೈದ್ಯಕೀಯ ವಿದ್ಯಾರ್ಥಿಗಳೂ ಬಂದು ಬಂದು ನೋಡಿ ಹೋಗುತ್ತಿದ್ದರು. ಒಂದು ದಿನ ನನಗೆ ಆಪರೇಷನ್ ಮಾಡುವುದೆಂದು ತೀರ್ಮಾನಿಸಲಾಯಿತು. ಆಗೆಲ್ಲ ಆಪರೇಷನ್ ಎಂದರೆ ಅರ್ಧ ಮರಣವೆಂದೇ ಜನರಲ್ಲಿ ಭಾವನೆ ಇತ್ತು. ಅವ್ವ ಅಪ್ಪರಿಗೂ ಭಯ ಆತಂಕ ಮನೆ ಮಾಡಿತ್ತು. ಆಪರೇಷನ್ ಯಶಶ್ವಿಯಾಯಿತು. ವೈದ್ಯರಿಗೂ , ಅಲ್ಲಿಗೆ ಹೋಗಲು ಸಲಹೆ ನೀಡಿದ ಮಾಸ್ತರರಿಗೂ ಕೃತಜ್ಞತೆ ಸಲ್ಲಿಸಿ ಮರಳಿ ಊರಿಗೆ ಬಂದೆವು. ಅಂದು ಮಾಡಿದ ಆಪರೇಷನ್ ಗುರುತು ಇಂದಿಗೂ ನನ್ನ ಬೆನ್ನ ಮೇಲಿದ್ದು ಆ ಘಟನೆಯನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಹಳ್ಳಿಗಳಲ್ಲಿ ವೈದ್ಯಕೀಯ ಸೌಲಭ್ಯಗಳ ಬಗೆಗೆ ಮಾತು ಬಂದಾಗ ಈ ನೆನಪು ಮರುಕಳಿಸಿ ಕಣ್ಣನ್ನು ಒದ್ದೆ ಮಾಡುತ್ತದೆ. .
ಗರ್ದಿಗಮ್ಮತ್ತು /ಬಾಂಬೆ ಶೋ
ನಮ್ಮೂರಿನ ಜಾತ್ರೆಯ ಸಂದರ್ಭದಲ್ಲಿ ಊರಿನ ಬಜಾರಿನಲ್ಲಿ ಅನೇಕ ಅಂಗಡಿಗಳಿರುತ್ತಿದ್ದವು. ಬೆಂಡು - ಬತ್ತಾಸು ಮಾರುವ , ಸಿಹಿ ಖಾರ ತಿಂಡಿ ಮಾರುವ ಅಂಗಡಿಗಳು, ರಿಬ್ಬನ್ನು, ಬಳೆ ಹೆಗ್ಗೋ ಬಟ್ಟೆ ಮಾರುವ ಅಂಗಡಿಗಳು . ಅದರಲ್ಲಿ “ಸಿಣ್ಣಿ” ಎಂಬ ಒಂದು ಸಿಹಿ ತಿಂಡಿ ನನಗೆ ತುಂಬಾ ಇಷ್ಟವಿವಾದ ಸಿಹಿ ಖಾದ್ಯವಾಗಿತ್ತು. ಇದಲ್ಲದೆ ಮಕ್ಕಳಿಗೆ ಬೇಕಾಗುವ ಆಟದ ಸಾಮಾನುಗಳು , ಬಟ್ಟೆ ಅಂಗಡಿಗಳು ಇರುತ್ತಿದ್ದವು. ಇದರಲ್ಲಿ ನಮಗೆ ಆಕರ್ಷಕವಾಗಿ ಕಾಣುತ್ತಿದ್ದ ಮತ್ತೊಂದು ಅಂಗಡಿ ಎಂದರೆ ಬಣ್ಣ ಬಣ್ಣದ ಅಂದರೆ ಹಸಿರು ,ಕೆಂಪು, ಕೇಸರಿ ನೀಲಿ ಇತ್ಯಾದಿ ಬಣ್ಣಗಳ ಶರಬತ್ತು ಮಾರುತ್ತಿದ್ದ ಸಣ್ಣ ಹುಡುಗರೇ ನಡೆಸುತ್ತಿದ್ದ ಅಂಗಡಿ. ಅದರ ಮುಂದೆ ಅದೆಷ್ಟೋ ಹೊತ್ತು ಬೇರೆಯವರು ಕೊಳ್ಳುತ್ತಿದ್ದುದ್ದನ್ನು ಆಸೆಗಣ್ಣಿನಿಂದ ನೋಡುತ್ತಾ ನಿಲ್ಲುತ್ತಿದ್ದೆವು.
ಜಾತ್ರೆಯ ಸಂದರ್ಭದಲ್ಲಿ ಕಿಳ್ಳಿಕ್ಯಾತರಾಟ , ದೊಂಬರಾಟಗಾರರೂ ಬಂದು ಜನರನ್ನು ವಿಶೇಷವಾಗಿ ಆಕರ್ಷಿಸುತ್ತಿದ್ದವು . ಯಾಕೆಂದರೆ ಅದರಲ್ಲಿ ಸಣ್ಣ ಹುಡುಗಿಯೊಬ್ಬಳು ೧೦ ಅಡಿ ಎತ್ತರದ ಮೇಲೆ ಕಟ್ಟಿದ ಹಗ್ಗದ ಮೇಲೆ ನಡೆಯುತ್ತಿದ್ದಳು. ಇದು ನಮಗೆಲ್ಲ ಉಸಿರು ಬಿಗಿ ಹಿಡಿದು ನೋಡಬಹುದಾದ ದೃಶ್ಯವಾಗಿರುತ್ತಿತ್ತು. ಯಾವ ಕ್ಷಣದಲ್ಲಾದರೂ ಏನು ಬೇಕಾದರೂ ಆಗುವ ಸನ್ನಿವೇಶ . ನಾವು ಕಣ್ಣು ಪಿಳಿಕಿಸದೆಯೇ ಹಲ್ಲು ಬಿಗಿ ಹಿಡಿದು ಮುಂದೇನು ಎಂದು ಕುತೂಹಲಭರಿತರಾಗಿ ತದೇಕಚಿತ್ತದಿಂದ ಭಯಪಟ್ಟು ನೋಡುತ್ತಿದ್ದೆವು. ಆಧುನಿಕ ಸರ್ಕಸ್ಸಿನಲ್ಲಿ ಇಂತಹ ಆಟ ಆಡುವಾಗ ಸೊಂಟಕ್ಕೆ ತೆಳ್ಳನೆಯ ಒಂದು ಕಂಬಿ ಕಟ್ಟಿಕೊಂಡು ಆಸರೆ ಪಡೆದಿರುತ್ತಾರೆ. ನಮ್ಮ ಊರಿನಲ್ಲಿ ಅಂತಹದೇನೂ ಇರದೇ ಹಸಿವಿನ ಹೊಟ್ಟೆ ತುಂಬಿಸಲು ಕೇವಲ ಪ್ರತಿಭೆ ಮತ್ತು ಅದೃಷ್ಟದಿಂದ ಮಾತ್ರವೇ ಆಟ ನಡೆಯುತ್ತಿತ್ತು. ಕೊನೆಯವರೆಗೂ ಮಕ್ಕಳಾದ ನಮ್ಮಲ್ಲಿ ಭಯ ಮತ್ತು ರೋಮಾಂಚನಗಳು ಇರುತ್ತಿದ್ದವು.
ಇಂತಹ ಒಂದು ದಿನ ಸಂತೆ ಪೇಟೆಯ ರಂಗಾರಿಯವರ ಮನೆಯ ಹತ್ತಿರ ಒಂದು ಆಟ ನಡೆಯುತ್ತಿತ್ತು. ಅದು ಸಂತೆ ನಡೆಯುತ್ತಿದ್ದ ಜಾಗದ ಹತ್ತಿರ ಇದೆ . ಅದರ ಹತ್ತಿರವೇ ಇದ್ದ ಒಂದು ಗುಡಿಯ ಕಟ್ಟೆಯ ಮೇಲೆ ಜನ ನೆರೆದಿದ್ದರು. ತಾಳದಂತಹ ಸಂಗೀತದ ಶಬ್ದವೂ ಕೇಳುತ್ತಿತ್ತು. ನಾನು ಕುತೊಹಲದಿಂದ ಅತ್ತ ಓಡಿದೆ. ಅದು ಸಂಜೆ ೭ ಗಂಟೆಯ ಸಮಯವಿರಬಹುದು . ಹಿರಿಯರೂ , ಕಿರಿಯರೂ ಎಲ್ಲರೂ ಇದ್ದರು. ಅಲ್ಲೊಬ್ಬ ಗರ್ದಿ ಗಮ್ಮತ್ತಿನ ಆಟ ತೋರಿಸುತ್ತಿದ್ದ.
ಆಕರ್ಷಕವಾಗಿ ಮಾತನಾಡುತ್ತ ; ತಾಳ ಹಾಕುತ್ತ ಜನರನ್ನು ಕರೆಯುತ್ತಿದ್ದ. ' ಓ ಬನ್ನಿ ಅಣ್ಣ , ಬನ್ನಿ ಅಕ್ಕ , ಅರಮನೆ ನೋಡಿ, ಬಾಂಬೆ ನೋಡಿ, ಆನೆ ನೋಡಿ ..... ' ಹೀಗೆ ಕೂಗುತ್ತ ಒಂದು ಕೈಯಿಂದ ಗಾಲಿ ತಿರುಗಿಸುತ್ತಿದ್ದ. ಮುಂದೆಯೇ ನಿಂತಿದ್ದ ನನ್ನನ್ನು ಕರೆದು ಒಂದು ಕಿಂಡಿಯ ಮೂಲಕ ನೋಡಲು ಹೇಳಿ ಮುಂಬೈ ನೋಡು, ಸಮುದ್ರ ನೋಡು, ದೆಹಲಿ ನೋಡು , ರಾಮ ರಾವಣನ್ನು ಹೊಡೆದನಲ್ಲವೇ? ... ಎಂದು ಹೇಳಿ , ಚೆನ್ನಾಗಿದೆಯಲ್ಲವೇ ಎಂದು ಕೇಳಿ ನನ್ನಿಂದ ‘ಹೂಂ’ ಎಂದು ಅನ್ನಿಸಿದ. ಯಾವ ಮಾಯೆಯೋ ನಾನು ಕಾಣದಿದ್ದರೂ ಹೂಂ ಎಂದು ಹೇಳಿದ್ದೆ! ಹೊರಗೆ ನಿಂತ ಇತರರಿಗೆ ಇನ್ನೂ ಕುತೂಹಲ . ಜನರಿಗೆ ಮಂಕು ಬೂದಿ ಎರಚಲು ಇಂತಹ ತಂತ್ರ ಬಳಸಿದ್ದ ಗರ್ದಿ ಗಮ್ಮತ್ತಿನವ. ಆಮೇಲೆ ನನಗೆ ಎಲ್ಲರೂ ಕೇಳುವವರೇ , “ನಿಜವಾಗಲೂ ಕಂಡಿತೇನೋ” ಎಂದು. ಹಾಗೇನೂ ಇಲ್ಲ ,ಆಗ ನಾನು ಸುಂಸುಮ್ಮನೆ ಹೂಂ ಎಂದಿದ್ದೆ ಎಂದು ನಿಜ ಹೇಳಲೇಬೇಕಾಯಿತು.
ಇತರೇ ನೆನಪುಗಳು
ನೆನಪುಗಳಿಗೇನೂ ಬರವಿಲ್ಲ! ನಮ್ಮ ಮನೆಯಲ್ಲಿ ಒಂದು ಕಟ್ಟಿಗೆಯ ಕಪಾಟಿತ್ತು. ಪ್ರತಿ ಬೆಸುಗೆಯಲ್ಲೂ ಅದು ನಮಗೊಂದು ನಿಧಿಯಂತೆ ಅನಿಸುತ್ತಿತ್ತು. ಅದರಲ್ಲಿ ಹೇಗೋ ಅನೇಕ ವರ್ಷಗಳ ಹಳೆಯ ಚಂದಮಾಮ ಸಂಚಿಕೆಗಳು ಇದ್ದವು. ಪ್ರತಿ ವರ್ಷವೂ ಮತ್ತೆ ಮತ್ತೆ ನಾನು/ನಾವು ಅವನ್ನು ಓದುತ್ತಿದ್ದೆವು. ಹೊಸ ಸಂಚಿಕೆಗಳಂತೂ ತರಿಸಲಾಗುತ್ತಿರಲಿಲ್ಲವಲ್ಲ! ಅದರಲ್ಲಿನ ಸಚಿತ್ರ ರಾಮಾಯಣ, ಮಹಾಭಾರತ ಕತೆಗಳೂ ,ಬೇತಾಳನ ಕತೆಗಳೂ ನಮಗೆ ಎಷ್ಟು ಸಲ ಓದಿದರೂ ಬೇಸರ ತರಿಸುತ್ತಿರಲಿಲ್ಲ. ಹಿಚ್ಚು ಕಡಿಮೆ ಪ್ರತಿ ವರ್ಷವೂ ಅವುಗಳನ್ನು ಮತ್ತೆ ಮತ್ತೆ ಓದುತ್ತಿದ್ದೆವು . ಇವುಗಳ ಜೊತೆಗೆ ಒಂದಿಷ್ಟು ಆಕರ್ಷಕ ಚಿತ್ರಗಳಿದ್ದ ಭಗವದ್ಗೀತೆ , ರಾಮಾಯಣದ ಪುಸ್ತಕಗಳೂ ಇದ್ದವು. ಅವುಗಳಲ್ಲಿ ಗ್ಲಾಸ್ಸಿ ಹಾಳೆಯಲ್ಲಿ ಪ್ರಿಂಟ್ ಮಾಡಿದ್ದ ಅತ್ಯಾಕರ್ಷಕ ಚಿತ್ರಗಳಿದ್ದವು. ಇತರೆ ಪುಸ್ತಕಗಳ ಜೊತೆಗೆ ಈ ಪುಸ್ತಕಗಳೂ ನಾವು ಮುಂದೆ ಗೊಂಡಬಾಳ ಬಿಟ್ಟ ಬಂದಾಗ ಕಳುವಾಗಿ ಹೋದವು. ಅದೊಂದು ದುರಂತ ಕತೆ; ಸಾದ್ಯವಾದರೆ ನಂತರ ಹೇಳುವೆ.
ಸೈಕಲ್ -ಈಜು ಕಲಿತಿದ್ದು
ಸೈಕಲ್ ಓಡಿಸುವುದು, ಈಜು ಕಲಿಯುವುದು ಆಗ ನಮ್ಮ ಊರಿನ ಎಲ್ಲ ಗಂಡು ಮಕ್ಕಳ ಹವ್ಯಾಸ ಮತ್ತು ಹೆಮ್ಮೆಯ ಸಂಗತಿಗಳಾಗಿದ್ದವು. ಸೈಕಲ್ ಆಗ ಒಂದು ಅತ್ಯಂತ ಆಧುನಿಕ ವಾಹನವಾಗಿತ್ತು. ನಮ್ಮ ಮನೆಯಲ್ಲಿ ಇರಲಿಲ್ಲ. ಅಪ್ಪನಿಗೂ ಬರುತ್ತಿರಲಿಲ್ಲ. ಯಾವಾಗಲಾದರೂ ನಮ್ಮ ಅಣ್ಣಂದಿರು ಕೊಪ್ಪಳದಿಂದ ತಂದಿದ್ದಾಗ - ಅದೂ ಬಾಡಿಗೆಗೆ , ನಾವು ಒಂದು ಕ್ಷಣವೂ ಬಿಡದೆ ಅದನ್ನು ಕಲಿಯಲು ಬಳಸುತ್ತಿದ್ದೆವು. ಇಲ್ಲದಿದ್ದರೆ ೧೦ ಪೈಸೆ ಕೊಟ್ಟು ಬಾಡಿಗೆಗೆ ಪಡೆಯಬೇಕಾಗಿತ್ತು. ಈಗಿನಂತೆ ಆಗ ಸಣ್ಣ ಮಕ್ಕಳಿಗಾಗಿಯೇ ಅಂತ ಸಣ್ಣ ಸಣ್ಣ ಸೈಕಲ್ಗಳಿರಲಿಲ್ಲ. ಎತ್ತರದ ಸೈಕಲ್ ಮಕ್ಕಳಾದ ನಮಗೆ ಎಟುಕುತ್ತಿರಲಿಲ್ಲ. ಆದ್ದರಿಂದ ಅಡ್ಡಗಾಲು ಹಾಕಿ ಅಂದರೆ ಕ್ರಾಸ್ ಬಾರ್ ಹಾಕಿ ಎಲ್ಲರೂ ಕಲಿಯುತ್ತಿದ್ದೆವು. ಅಂತೂ ಸೈಕಲ್ ಓಡಿಸುವುದು ಕಲಿತೆ, ಹೇಗೆ ?ಯಾವಾಗ< , ಎಷ್ಟು ಸಲ ಬಿದ್ದು? ಎಂದು ನೆನಪಿಲ್ಲ.
ಬೆಸುಗೆಯಲ್ಲಿ ಈಜುವುದು ಗಂಡು ಹುಡುಗರ ಹವ್ಯಾಸ. ಬರದಿದ್ದವರು ಕಲಿಯುವುದು ಕಲಿತವರು ಬೆಸುಗೆಯ ಧಗೆ ಮರೆಯಲು ಈಜುವುದು , ಕಲಿಸುವುದು , ಮೇಲಿಂದ ಎಗರುವುದು ಇತ್ಯಾದಿ. ಆಗ ನಾನಿನ್ನೂ ೩-೪ ನೆಯ ತರಗತಿಯಲ್ಲಿ ಇದ್ದೆ ಅಂತ ಕಾಣುತ್ತೆ. ಎಲ್ಲರಂತೆ ನನಗೂ ಕಲಿಯುವ ಆಸೆ. ಆಗ ಬೆನ್ನಿಗೆ ಈಜಿನ ಪೆಂಡಿ ಎಂದು ಕರೆಯುವ - ಹಗುರವಾದ ಗಳುಗಳನ್ನು ಬೆನ್ನಿಗೆ ಕಟ್ಟಿಕೊಂಡು ಕಲಿಯುತ್ತಿದ್ದರು-ಕಲಿಸುತ್ತಿದ್ದರು.
ಈಜಲು ಆಗ ನಮ್ಮ ಊರಿನಲ್ಲಿ ಸಣ್ಣ ಬಾವಿ ದೊಡ್ಡ ಬಾವಿ ಎಂಬ ಎರಡು ಬಾವಿಗಳಿದ್ದವು. ನಾನು ಕಲಿಯುತ್ತಿದ್ದದ್ದು ಸಣ್ಣ ಬಾವಿಯಲ್ಲಿ. ಅದು ೮ x ೧೨ ಅಡಿಯ ಬಾವಿ ಇದ್ದಂತೆ ಎಂದು ಈಗ ನನಗೆ ಅನಿಸುತ್ತಿದೆ. ಒಂದು ವಾರದ ಈಜು ಪೆಂಡಿಯ ತರಬೇತಿಯ ನಂತರ ನಾನು ಬೇರೆಯವರಿಂದ ಹೊಗಳಿಸಿಕೊಂಡು ಉತ್ಸಾಹಿತನಾಗಿದ್ದೆ. ಒಂದು ದಿನ ಬೆಳೆಗ್ಗೆ ಮನೆಯಲ್ಲಿ ಯಾರಿಗೂ ಹೇಳದೆ ಸಣ್ಣ ಬಾವಿಗೆ ಹೋದೆ. ಅಲ್ಲಿ ಆಗಲೇ ಕೆಲ ಹುಡುಗರು ಇದ್ದರು. ನಾನು ಈಜು ಪೆಂಡಿಯನ್ನು ಕಟ್ಟಿಕೊಂಡು ಬಾವಿಗೆ ಹುಮ್ಮಸ್ಸಿನಿಂದ ಹಾರಿದೆ. ಓ , ನನ್ನ ಪೆಂಡಿ ಬೆನ್ನಿನಿಂದ ಕಳಚಿತು , ಅಧೀರನಾದೆ. ಆದರೂ ಅಷ್ಟು ದಿನ ಕಲಿತ ಅಭ್ಯಾಸದಿಂದಾಗಿ ಕೈಕಾಲು ಬಡಿಯುತ್ತ ದಡ ಸೇರಿದೆ. ಹೀಗೆ ಅಂತೂ ನಾನು ಅಂದಿನಿಂದ ಪೆಂಡಿಯ ಸಹಾಯವಿಲ್ಲದೆ ಈಜಾಡಲು ಕಲಿತೆ.
ಕಂಬಾರಕಲ್ಲು ಗುಡ್ಡದಕಲ್ಲು ತಾಣಗಳು
ತುಂಗಭದ್ರಾ ನದಿ ನೀರು ಬಂದಾಗ ನಮ್ಮೂರು ನೀರಿನಿಂದಾವೃವಾಗುತ್ತಿತ್ತು ತಾನೇ? ಅಂತಹ ಸಂದರ್ಭಗಳಲ್ಲಿ ಎತ್ತ ಕಡೆ ನೋಡಿದರೂ ನೀರು ನೀರು,ನೀರು. ಆಗ ಎಲ್ಲ ಜಾಗಗಳೂ ಮುಳುಗಿರುತ್ತಿದ್ದವು . ಊರಿನಿಂದ ತುಸು ದೂರದಲ್ಲಿದ್ದ ಕಂಬಾರಕಲ್ಲು , ಗುಡ್ಡದಕಲ್ಲು ಎಂಬ ಜಾಗಗಳು ಎತ್ತರದಲ್ಲಿದ್ದ ಕಾರಣ ಪೂರ್ತಿ ಮುಳುಗುತ್ತಿರಲಿಲ್ಲ. ಅಂತಹ ಸಮಯದಲ್ಲಿ ನಾವು ಅಂದರೆ ನಮ್ಮ ಅಕ್ಕ ಮತ್ತು ಅವರ ಓರಗೆಯವರ ಜೊತೆ ಈ ಸ್ಥಳಗಳಿಗೆ ಹೋಗುತ್ತಿದ್ದೆವು . ಅವರದು ಬಟ್ಟೆ ಒಗೆಯುವ ಕೆಲಸ , ನಾವು ನೀರಿನಲ್ಲಿ ಕಾಲು ಇಳಿ ಬಿಟ್ಟು ಸುತ್ತಲಿನ ನೀರು ಅದು ಎಳೆದೊಯ್ಯುತ್ತಿದ್ದ ಗಿಡ , ಬೊಡ್ಡೆ ಮತ್ತಿತರ ವಸ್ತುಗಳನ್ನು ನೋಡುತ್ತಾ ಕುಳಿತು , ನೀರಿಗೆ ಏನನ್ನಾದರೂ ಎಸೆಯುತ್ತಾ ಕಾಲ ಕಳೆಯುತ್ತಿದ್ದೆವು. ಅವುಗಳು ನಿಜಕ್ಕೂ ರಮ್ಯವಾದ , ವಿಹಂಗಮವಾದ ದೃಶ್ಯಗಳಾಗಿರುತ್ತಿದ್ದವು.
ಅನ್ನದಾನಸ್ವಾಮಿ ಮಠ
ಅನ್ನದಾನಸ್ವಾಮಿ ಮಠ ನಮ್ಮ ಊರಿನ ಜನರ ಬಾಯಲ್ಲಿ ಅಂದಾನಸ್ವಾಮಿ ಮಠ ಆಗಿತ್ತು. ಹಳೆಯ ಮಠ - ಸುಂದರವಾದ ಕಟ್ಟಡವಾಗಿತ್ತು. ನನ್ನ ಕಾಲಕ್ಕಾಗಲೇ ಅದು ತುಂಗಭದ್ರಾ ನೀರಿನಿಂದ ಆವೃತವಾಗಿ ಶಿಥಿಲಾವಸ್ಥೆ ತಲುಪಿತ್ತು. ತುಸು ಎತ್ತರದ ಮೇಲೆ ನಿರ್ಮಿತವಾದ ಅದು ಕಲ್ಲಿನಿಂದ ಕಟ್ಟಲ್ಪಟ್ಟಿತ್ತು . ಅಲ್ಲಿ ಲಿಂಗಾಯತ ಸ್ವಾಮಿಗಳು ಆಗಾಗ ಅಲ್ಲಿರುತ್ತಿದ್ದ ನೆನಪು. ಎಷ್ಟೋ ವರ್ಷಗಳ ಮುಳುಗಡೆಯ ನಂತರ ಅದನ್ನು ಕೆಡವಿ ಹೊಸ ಗೊಂಡಬಾಳಿನಲ್ಲಿ ಅದೇ ರೀತಿ ಕಟ್ಟಿದರು. ಏಕೋ ನನಗೆ ಹೊಸ ಕಟ್ಟಡ ಹಳೆಯದರಷ್ಟು ಭವ್ಯವೆನಿಸಲೇ ಇಲ್ಲ. ಆದರೆ ಅದನ್ನು ಕಟ್ಟಿದ್ದೊಂದು ಸಾಹಸವಾಗಿತ್ತು.
ಜನರು ಕಲ್ಲು ಸಾಗಿಸಲು ಒಂದು ಅನೂಹ್ಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಪ್ರತಿ ಮನೆಯಿಂದ ಪ್ರತಿದಿನ ಒಂದು ಎತ್ತಿನ ಗಾಡಿ ಕಲ್ಲು ಸಾಗಿಸುವುದೇ ಆ ವ್ಯವಸ್ಥೆಯಾಗಿತ್ತು. ಅಂತೂ ಮಠ ನಿರ್ಮಾಣವಾಯಿತು. ಆಮೇಲೆ ಅಲ್ಲಿ ಕೊಪ್ಪಳದ ಗವಿ ಮಠದಿಂದ ಒಂದು ಹೈಸ್ಕೂಲು ಆರಂಭವಾಯಿತಂತೆ. ಇನ್ನೊಂದು ಸಲ ಹೋದಾಗ ಅದನ್ನು ನೋಡಿ ಬರಬೇಕು.!
ಸಾರಿಗೆಯ ಬವಣೆ
ನಮ್ಮೂರಿಗೆ ಯಾವುದೇ ಸಾರಿಗೆ ವ್ಯವಸ್ಥೆ ಇರಲಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ನಾವು ಹೆಚ್ಚಾಗಿ ಯಾವ ಊರಿಗೂ ಹೋಗುತ್ತಿರಲಿಲ್ಲ. ಎಲ್ಲಿಗೇ ಹೋಗಬೇಕಾದರೂ ಕೊಪ್ಪಳದ ಮೂಲಕವೇ ಹಾಗಬೇಕಾಗಿತ್ತು. ಆದರೆ ಅಲ್ಲಿಗೆ ಯಾವುದೇ ಸೌಕರ್ಯವಿರಲಿಲ್ಲ - ಕಾಲ್ನಡಿಗೆ , ಎತ್ತಿನ ಗಾಡಿಯ ಪ್ರಯಾಣವನ್ನು ಬಿಟ್ಟು.
ಆಗಾಗ ಅವ್ವ ಮತ್ತು ನಾವು - ಮಕ್ಕಳು , ಅಪ್ಪ ಬರುತ್ತಿದ್ದ ನೆನಪಿಲ್ಲ; ನಮ್ಮ ಮನೆಯ ಕುಲದೇವತೆ ಹೊಸಪೇಟೆ-ಮುನಿರಾಬಾದ್ ಹತ್ತಿರವಿರುವ ಹುಲಿಗೆಮ್ಮ ದೇವರ ಗುಡಿಗೆ ಹರಕೆ- ಪೂಜೆ ಸಲ್ಲಿಸಲು ಹೋಗುತ್ತಿದ್ದೆವು. ಅದು ಸುಮಾರು ೩೦ ಕಿ ಮೀ ದೂರದ ಸ್ಥಳ. ಆದರೆ ಅಲ್ಲಿಗೆ ಹೋಗುವುದೇ ಒಂದು ಸಾಹಸದ ಕೆಲಸ. ಗೊಂಡಬಾಳಿನಿಂದ ಕೊಪ್ಪಳಕ್ಕೆ ಇಲ್ಲವೇ ಯಾರದಾದರೂ ಪರಿಚಯದ ಎತ್ತಿನಗಾಡಿಯಲ್ಲಿ ದೈನ್ಯವಾಗಿ ಬೇಡಿಕೊಂಡು ಹೋಗಿ ನಂತರ ರೈಲಿನಲ್ಲಿಯೂ ಆಮೇಲೆ ದೇವಸ್ಥಾನದತನಕ ನಡೆದೋ ಇಲ್ಲವೇ ಜಟಕದಲ್ಲಿಯೂ ಹೋಗಬೇಕಾಗಿತ್ತು. ಅಲ್ಲಿ ಪೂಜೆಯ ನಂತರ ನದಿಯ ತೀರಕ್ಕೆ ಹೋಗಿ ನದೀ ಪೂಜೆ ಮಾಡಿ ಕಟ್ಟಿಕೊಂಡು ಹೋಗಿದ್ದ ಬುಟ್ಟಿಯ ಊಟ ಮಾಡುತ್ತಿದ್ದೆವು. ಅದೇ ಸಮಯದಲ್ಲಿ ಯಾವುದಾದರೊಂದು ರೈಲು ಬಂದು ನಮಗೆ ತುಂಬಾ ಖುಷಿ ನೀಡುತ್ತಿತ್ತು. ಆಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಜನ ಕಿಟಕಿಯಿಂದ ನಾಣ್ಯ ಎಸೆಯುತ್ತಿದ್ದರು. ಆ ನೋಟ ನಮಗೆ ಇಮ್ಮಡಿ ಖುಷಿ ಕೊಡುತ್ತಿತ್ತು. ನಂತರ ಮರಳಿ ಯಥಾ ರೀತಿ ವಾಪಸ್ ಊರಿಗೆ ಬರುವ ಕೆಲಸ. ಅದು ಸಾಧ್ಯವಾಗದಿದ್ದರೆ ಒಮ್ಮೊಮ್ಮೆ ನಮ್ಮ ದೊಡ್ಡಪ್ಪನ ಒಂದು ಅಂಕಣದ ರೂಂನಲ್ಲಿ ಇದ್ದು ಬರುತ್ತಿದ್ದೆವು. ಇನ್ನೂ ಕೆಲವೊಮ್ಮೆ ನಮ್ಮ ಸೋದರಮಾವನ ಮಕ್ಕಳು 'ಮಧುಕರ’ ವೃತ್ತಿ ಯಿಂದ ಬದುಕಿ ವಿದ್ಯಾಭ್ಯಾಸ ಮಾಡುತ್ತಿದ್ದ ಒಂದು ದೇವರ ಗುಡಿಯಲ್ಲಿ ( ಹೆಸರು ಜ್ಞಾಪಕಕ್ಕೆ ಬರುತ್ತಿಲ್ಲ) ಆಶ್ರಯ ಪಡೆಯುತ್ತಿದ್ದೆವು. ಅವರಿಗೆ ಇದ್ದ ಸ್ವಲ್ಪವೇ ಜಾಗವನ್ನು ನಮಗೂ ನೀಡುತ್ತಿದ್ದರು. ಅಂದ ಹಾಗೆ , ಕೆಲ ಕಾಲ ನಮ್ಮ ಸೋದರಮಾವನ ಮಗನೂ ನಮ್ಮ ಊರಿನಲ್ಲಿ ನಮ್ಮ ಮನೆಯಲ್ಲಿ ಇದ್ದು ಶಾಲೆಗೆ ಹೋಗುತ್ತಿದ್ದ. ಆದರೆ ಈ ಸೋದರಮಾವನ ಮಕ್ಕಳು ಬೇರೆ.
ಸರಳವಾಗಿ ಹೇಳಬೇಕೆಂದರೆ ಆಗಿನ ಎಲ್ಲ ಬಂಧುಗಳ ಜೀವನ ನಮ್ಮ ಬದುಕಿನಂತೆಯೇ ಬಡತನದಿಂದಾವೃತವಾಗಿತ್ತು. ಆದರೆ ನಮ್ಮ ಸೋದರಮಾವರು ಒಂದಾನೊಂದು ಕಾಲದಲ್ಲಿ ಸಮೃದ್ಧ ಜೀವನ ನಡೆಸುತ್ತಿದ್ದರಂತೆ. ನನಗೆ ತಿಳುವಳಿಕೆ ಬರುವಷ್ಟರಲ್ಲಿಯೇ ಅವರ ಬದುಕು ದಾರಿದ್ರ್ಯದ ಹಾದಿ ಹಿಡಿದಿತ್ತು.
ಊರಿನ ಹಿರಿಯ - ಮುಂದಾಳು ಕೂಲಿ ಕೊಟ್ರಪ್ಪ
ಊರಿನ ಜನರಿಂದ ಸಾಹುಕಾರರೆಂದು ಕರೆಸಿಕೊಳ್ಳುತ್ತಿದ್ದರೂ , ಕಪ್ಪತ್ತೆಪ್ಪ ಕುಟುಂಬದವರು ಊರಿನ ಮುಂದಾಳು ಆಗಿರಲಿಲ್ಲ! ಆದರೆ ಊರಿನ ಮುಂದಾಳು - ಕೂಲಿ ಕೊಟ್ರಪ್ಪ. ಅವರು ಲಿಂಗಾಯತರು . ೫೦-೬೦ ಎಕರೆ ಜಮೀನು, ಒಕ್ಕಲತನ , ಆಳು ಕಾಳು ಇದ್ದು ಊರಿನ ಎಲ್ಲ ಆಗು ಹೋಗುಗಳ ನಿರ್ಣಾಯಕರೂ , ಗಣ್ಯ ವ್ಯಕ್ತಿಗಳೂ ಆಗಿದ್ದರು. ಅವರು ಅಣ್ಣ ತಮ್ಮ ಬೇರೆ ಬೇರೆ ಇದ್ದು ಬದುಕು ಸಾಗಿಸುತ್ತಿದ್ದರು. ಊರಿನ ಎಲ್ಲ ನಿರ್ಣಯ , ಜಗಳ ಕದನಗಳ ಪಂಚಾಯಿತಿ ಇತರೆ ವಿಷಯಗಳನ್ನು ಜನ ಅವರ ಗಮನಕ್ಕೆ ತರುತ್ತಿದ್ದರು. ಅವರೂ ನನಗೆ ತಿಳಿದಂತೆ ನ್ಯಾಯಯುತವಾಗಿ ಅಂದಿನ ಕಾಲಕ್ಕೆ ತಕ್ಕಂತೆ ನ್ಯಾಯ ನಿರ್ಣಯ ಮಾಡುತ್ತಿದ್ದರು. ಸಭ್ಯತೆ, ವಿನಯ ಹಾಗೂ ಗೌರವಯುತವಾದ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ನಮ್ಮ ಕುಟುಂಬವೂ ಅವರೊಂದಿಗೆ ಆತ್ಮೀಯವಾಗಿ ಇತ್ತು. ನಮ್ಮ ಅಣ್ಣಂದಿರ ವಿದ್ಯಾಭ್ಯಾಸಕ್ಕಾಗಿ ಅವರು ನೆರವು ನೀಡಿದ ನೆನೆಪು. ಸಾಹುಕಾರರಿಗೂ, ಕೊಟ್ರಪ್ಪನಿಗೂ ಯಾವುದೇ ಘರ್ಷಣೆ ಇರಲಿಲ್ಲ. ಬಲಾಢ್ಯವಾದ ಲಿಂಗಾಯತ ಜಾತಿಯೂ ಅವರ ಜೊತೆಗಿತ್ತು.
ಹಿಂದೂ-ಮುಸ್ಲಿಂ ಘರ್ಷಣೆ
ಇಂತಿಪ್ಪ ನಮ್ಮ ಊರಿನಲ್ಲೂ ಒಂದು ಅಸಹ್ಯಕರ ಘಟನೆ ನಡೆದಿದ್ದೊಂದು ವಿಪರ್ಯಾಸವೇ ಸರಿ. ನನಗೆ ನೆನಪಿರುವಷ್ಟು ಇಲ್ಲಿ ದಾಖಲಿಸುತ್ತೇನೆ.
ಒಂದು ಸಲ ಬಹುಶಹ ಮೊಹರಂ ಹಬ್ಬದ ದಿನ ಅಂತ ನೆನಪು - ಅಂದು ಹಿಂದೂ-ಮುಸ್ಲಿಂ ಘರ್ಷಣೆ ನಡೆಯಿತು . ಗೊಂಡಬಾಳಿನ ಕೋಮುಸಾಮರಸ್ಯಕ್ಕೆ ಕಪ್ಪು ಚುಕ್ಕೆ ಅಂಟಿತು. ಹಬ್ಬದ ದಿನ ಮುಸ್ಲಿಂ ವ್ಯಕ್ತಿ ಹಿಂದೂ ಹುಡುಗಿಯನ್ನು ಕೆಣಕಿದ ಎಂಬ ಕಾರಣಕ್ಕಾಗಿ ಪೇಟೆಯ ಮುಖ್ಯ ಬೀದಿಯಲ್ಲಿ ಹೊಡೆದಾಟವೇ ನಡೆದು ಹೋಯಿತು. ಅದು ನಿಜವಾದ ಕಾರಣವಾಗಿತ್ತೆ? ಯಾರಿಗೂ ನಮಗೂ ಸರಿಯಾಗಿ ತಿಳಿಯದು. ಮುಸ್ಲಿಂ ಹಬ್ಬದ ದಿನವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರೂ ಸೇರಿದ್ದರು . ಒಂದು ರೀತಿಯಲ್ಲಿ ಸಮಬಲದ ಹೋರಾಟ. ಯಾರೋ ಕೆಲವರು ಹೇಳಿದರಂತೆ , ಇಂದು ಬೇಡ ಹಬ್ಬದ ನಂತರ ಅವರನ್ನು ನೋಡಿಕೊಳ್ಳೋಣ ಎಂದು. ಮುಂದೇನಾಯಿತು , ಹೇಗೆ ಬಗೆಹರಿಯಿತು ನನಗೆ ತಿಳಿದಿಲ್ಲ.
ಹೈಸ್ಕೂಲು ವಿದ್ಯಾಭ್ಯಾಸದ ಸಮಸ್ಯೆ
ನನ್ನ ೭ನೆಯ ತರಗತಿಯ ನಂತರ ಹೇಗೆ ಎಂಬ ಸಮಸ್ಯೆ ಉದ್ಭವಿಸಿತು. ಇಂತಹುದೇ ಸಮಸ್ಯೆ , ಇದೇ ತೆರನಾದ ಸಂದರ್ಭ ನಮ್ಮ ಮನೆಯಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಉದ್ಭವಿಸುತ್ತಿತ್ತು. ಅದೇ , ನನ್ನ ೭ನೆಯ ತರಗತಿಯ ನಂತರ ಏನು ಮಾಡಬೇಕು ? ಹೇಗೆ ನಿಭಾಯಿಸಬೇಕು ? ಯಾವ ಊರಿಗೆ ಯಾವ ಶಾಲೆಗೆ ಸೇರಿಸಬೇಕು ಇತ್ಯಾದಿ .
ಇದೆ ಸಂದರ್ಭದಲ್ಲಿ ಒಂದು ವಿಷಯ. ನನಗಿದ್ದ ಮೂವರು ಅಕ್ಕಂದಿರಲ್ಲಿ ಇಬ್ಬರು ಆಗಲೇ ಮಾಡುವೆ ಆಗಿದ್ದು ಗಂಡನ ಮನೆಗೆ ಹೋಗಿದ್ದರು. ಇಬ್ಬರು ಅಣ್ಣಂದಿರು ಇದೆ ರೀತಿಯ ಸಮಸ್ಯೆ ಎದುರಿಸಿ ಬೇರೆ ಬೇರೆ ಪರಿಹಾರ ಕಂಡುಕೊಂಡಿದ್ದರು. ಹಿರಿಯ ಅಣ್ಣ ಅಪ್ಪನ ಪರಿಚಯ ಹಾಗೂ ಸಂಪರ್ಕದಿಂದಾಗಿ ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಇನ್ನೊಬ್ಬ ಅಣ್ಣನನ್ನು ಅಕ್ಕನ ಊರಾದ ಚಿತ್ರದುರ್ಗಕ್ಕೆ ಕಳಿಸಿದ್ದರು. ಮೂರನೇ ಮತ್ತು ನಾಲ್ಕನೇ ಅಣ್ಣಂದಿರು ದೊಡ್ಡ ಅಣ್ಣ ಇದ್ದ ಪೂನಾ ಸೇರಿ ಪಡಬಾರದ ಕಷ್ಟಗಳನ್ನೆದುರಿಸುತ್ತಿದ್ದರು .
ಬ್ರಾಹ್ಮಣರಾದರೂ ನಮ್ಮ ತಂದೆ ತಾಯಿ ೭ನೆಯ ತರಗತಿಯ ನಂತರ ಹೆಣ್ಣು ಮಕ್ಕಳನ್ನು ಓದಿಸುವ ಬಗೆಗೆ ಆಸಕ್ತಿ , ಪ್ರಯತ್ನ ನಡೆಸಿದ್ದು ನೆನಪಿಲ್ಲ . ಅಂದರೆ ನಮ್ಮ ಕುಟುಂಬವೂ ಸ್ತ್ರೀ ವಿದ್ಯಾಭ್ಯಾಸಕ್ಕೆ ತಲೆ ಕೆಡಿಸಿಕೊಂಡಿರಲಿಲ್ಲ! ಇದೊಂದು ದುರಂತವೇ ಸರಿ. ಒಟ್ಟಿನಲ್ಲಿ ನನ್ನ ಮೂವರು ಅಕ್ಕಂದಿರೂ ೭ ನೆಯ ತರಗತಿಯ ನಂತರ ಓದಲಾಗಲಿಲ್ಲ; ಓದಿಸಲಾಗಲಿಲ್ಲ. ಓದಿಸಬೇಕೆಂಬ ಆಲೋಚನೆಯೂ ಬಂದಿರಲಿಲ್ಲವೆಂದು ಕಾಣುತ್ತದೆ. ನಮ್ಮ ತಾಯಿಯೇ ತಮ್ಮ ಇಡೀ ಜೀವನವನ್ನು ಅನಕ್ಷರಸ್ಥರಾಗಿಯೇ ಸವೆಸಲಿಲ್ಲವೇ ?
ಆದ್ದರಿಂದ ನನ್ನ ಸರದಿ ಬಂದಾಗ ತಲೆ ಮೇಲೆ ಕೈಹೊತ್ತು ಕೂತಿದ್ದರು . ಈ ಹಿಂದೆ ಕಂಡುಕೊಂಡ ಪರಿಹಾರಗಳು ಫಲ ನೀಡಿರಲಿಲ್ಲ . ಸೋತು ಸುಣ್ಣವಾಗಿದ್ದರೂ ಅನಿವಾರ್ಯವಾಗಿ ಮತ್ತೆ ಮತ್ತೆ ಹೊಸ ಪ್ರಯೋಗ ಹೊಸ ಪರಿಹಾರ ಹುಡುಕಲು ತಡಕಾಡುತ್ತಿದ್ದರು. ಆಗಾಗ ಅಪ್ಪ ಅವ್ವ ಈ ವಿಷಯವಾಗಿ ಜಗಳವಾಡುತ್ತಿದ್ದರು. ಸೋತ , ಫಲ ನೀಡದ , ಯಶಸ್ವಿಯಾಗದ ಹಾಗೂ ಇದರ ಜೊತೆಗೆ ಹಣವಿರದ ಮನೆಗಳಲ್ಲಿ ಇದು ಸರ್ವಸಾಮಾನ್ಯ ತಾನೇ ?
ವಯೋ ಸಹಜವಾಗಿಯೂ , ಟಿ ಬಿ ಕಾಯಿಲೆಯಿಂದ ಸೋತು ಹೈರಾಣಾಗಿದ್ದ ಅಪ್ಪ ಪದೇ ಪದೇ “ಇತರರನ್ನು ಬೇಡುವುದು ನನಗಾಗದೆಂದು” ಕೈಚೆಲ್ಲಿ ಕುಳಿತಿದ್ದರು. ಈ ಹಿಂದಿನ ಪ್ರಯೋಗಗಳು ವಿಫಲವಾಗಿದ್ದೂ ಇದಕ್ಕೆ ಕಾರಣವಿರಬೇಕು . ಈ ಹೊತ್ತಿಗೆ ನಮ್ಮ ಅವ್ವ ಮನೆ ನಡೆಸುವ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಾಗಿತ್ತು. ಆದ್ದರಿಂದ ಈ ಬಾರಿ ನಾನೂ ಒಂದು ಬಾರಿ ಪ್ರಯತ್ನಿಸುತ್ತೇನೆ ಎಂದು ನಿರ್ಧರಿಸಿ ನನ್ನನ್ನು ಕರೆದುಕೊಂಡು ಕೊಪ್ಪಳದಲ್ಲಿದ್ದ , ಪರಿಚಯದ , ಸಹಾಯ ಮಾಡಬಹುದು ಎಂದು ಅನಿಸಿದ ಮನೆಗೆ ಕರೆದುಕೊಂಡು ಹೋದರು. ಅದು ಬ್ರಾಹ್ಮಣ ಜಹಗೀರ್ದಾರರ ಮನೆ. ಅವರು ಸಾಕಷ್ಟು ಸ್ಥಿತಿವಂತರೂ, ಅನುಕೂಲಸ್ಥರೂ ಆಗಿದ್ದರು. ಅವರ ಮನೆಯಲ್ಲಿ ಇದ್ದದ್ದು ೩-೪ ಜನ ಮಾತ್ರ. ಮನೆಯೂ ವಿಶಾಲವಾಗಿತ್ತು. ಅವರು ಆಶ್ರಯ ನೀಡಬಹುದು ಎಂದು ಅವ್ವ ಎಣಿಸಿದ್ದಳು.
ಮನೆಗೆ ಹೋದ ಮೇಲೆ ಅದೂ ಇದೂ ಮಾತನಾಡಿದರು. ಆಮೇಲೆ ಅವ್ವ ಬಂದ ವಿಷಯ ಪ್ರಸ್ತಾಪಿಸಿದರು- ನನ್ನೆದುರಿನಲ್ಲಿಯೇ ! ಆದರೆ ಅವರು " ನಾವು ಆಗಾಗ ಊರುಗಳಿಗೆ ಹೋಗುತ್ತಿರುತ್ತೇವೆ , ಮನೆಯಲ್ಲಿ ಅಡುಗೆ ಕೆಲಸ ಮಾಡುವವರು ಯಾರೂ ಇಲ್ಲ " ಎಂದು ಖಡಾ ಖಂಡಿತವಾಗಿ ಹೇಳಿದರು. ಬೇಕಿದ್ದರೆ ೫೦-೧೦೦ ರೂಪಾಯಿಗಳ ಸಹಾಯ ಮಾಡಬಹುದೆಂದು ಹೇಳಿದರು. ಕಾಲ ಬದಲಾಗಿದೆ, ಜವಾಬ್ದಾರಿ ಬೇಡವೆನ್ನುವ ಕಾಲ ಎಂದು ಅವ್ವ ಮಿಡುಕಾಡಿದಳು . ನಮ್ಮ ಬೇಡಿಕೆಯನ್ನು ತಿರಸ್ಕರಿಸಿದ್ದು ಅವ್ವನಿಗೆ ತುಂಬಾ ಬೇಸರ ತರಿಸಿತ್ತು. ಆದರೆ ವಿಧಿ ಇರಲಿಲ್ಲ. ಅವರು ಕೊಟ್ಟ ಅವಲಕ್ಕಿ ಚಹಾ ಸೇವಿಸಿ ಅಲ್ಲಿಂದ ಭಾರವಾದ ಮನಸ್ಸಿನಿಂದ ಹೊರಟು ಊರಿಗೆ ಬಂದೆವು.
ಕೊಪ್ಪಳ-ಗೊಂಡಬಾಳಿನ ಪ್ರಯಾಣದ ಕತೆ ಬರೆದರೆ , ಅದೇ ಒಂದು ಅಧ್ಯಾಯವಾಗುತ್ತದೇನೋ . ಯಾವುದೇ ಸಾರಿಗೆ ಸೌಕರ್ಯಗಳಿಲ್ಲದ ಆ ೧೦ ಕಿ ಮೀ ದೂರದ ದಾರಿ ಯಾಕೋ ಅಂದು ಮತ್ತಷ್ಟು ದೂರವಿನಿಸಿತು. ಬಿಸಿಲು - ಬಾಯಾರಿಕೆಗಳ ನಡುವೆ ಅಲ್ಪವೇ ಆದರೂ ಸಾಮಾನುಗಳ ಚೀಲವನ್ನು ಹೊತ್ತು ಸಾಗಬೇಕಿತ್ತು. ನಾವೇನೋ ಮಕ್ಕಳು ಅವ್ವ ಅಪ್ಪ ಅದು ಹೇಗೆ ನಿಭಾಯಿಸುತ್ತಿದ್ದರೋ ? ಒಂದು ಬಾರಿಯಂತೂ ಹೀಗಾಯಿತು. ನಾವು ಯಾವ ಕಾರಣಕ್ಕೋ ನೆನಪಿಲ್ಲ ಗೊಂಡಬಾಳಿನಿಂದ ಕೊಪ್ಪಳಕ್ಕೆ ಹೋಗುತ್ತಿದ್ದೆವು. ಅದು ಬಹುಶಹ ಕಾಡು ಬೆಸುಗೆಯ ಏಪ್ರಿಲ್ -ಮೇ ಕಾಲವಿರಬಹುದು . ಚುಕ್ಕನಕಲ್ಲು ಮಾರ್ಗವಾಗಿ ಹೋದರೆ ಹತ್ತಿರ ಎಂದು ನಿರ್ಧರಿಸಿ ಹೊರಟಿದ್ದೆವು. ನಾನು, ಅವ್ವ ಮತ್ತು ಅಪ್ಪ ಇದ್ದ ನೆನಪು. ಕಷ್ಟಬಿದ್ದು ಒಳದಾರಿ ಬಳಸಿ ಚುಕ್ಕನಕಲ್ಲಿನ ಹತ್ತಿರ ಹೋಗುತ್ತಿದ್ದೆವು. ಬಿಸಿಲಿನ ಧಗೆ ತಾಳಲಾರದಾದೆವು. ಕೆಂಡದಂತೆ ತಲೆ ಸುಡುತ್ತಿತ್ತು. ಕಾಳಂತೂ ಭೂಮಿಯ ಮೇಲೆ ಇಡಲಾರದಾದೆವು. ಕೊನೆಗೆ ಯಾವ್ ಹಂತ ತಲುಪಿದೆವು ಎಂದರೆ ತಲೆಗಿಂತ ಕಾಲಿನ ರಕ್ಷಣೆಯೇ ಮುಖ್ಯವೆಂದೆನಿಸಿತು . ತಲೆಯಮೇಲಿದ್ದ ಬಟ್ಟೆಯ ಚೀಲವನ್ನು ಕಾಲಡಿ ಹಾಕಿ ಆ ಬಿಸಿಲ ಧಗೆಯಲ್ಲಿ ನಿಲ್ಲಬೇಕಾಗಿ ಬಂತು. ಕೆಲ ವರ್ಷಗಳ ನಂತರ ಹೈದರಾಬಾದಿನಲ್ಲಿ ಬೆಸುಗೆಯಲ್ಲಿ ಇರಬೇಕಾಗಿ ಬಂದಾಗ ಅನಿಸಿದ್ದು , ಈ ನಿಜಾಮರಿಗೆ ಧಗೆಯ ಪ್ರದೇಶಗಳೆ ಇಷ್ಟವೇನೋ ಎಂದು !
ಮನೆಗೆ ಮರಳಿದ ನಂತರ ಅವ್ವ ಅಪ್ಪನಿಗೆ ಯಥಾರೀತಿ ವಿಷಯ ತಿಳಿಸಿದಾಗ , " ನಾನು ಬೇಡ ಬೇಡ ಎಂದರೂ ನೀನು ಕೇಳಲಿಲ್ಲ , ಈಗ ಕಾಲ ಬದಲಾಗಿದೆ ಜನರೂ ಮೊದಲಿನಂತಿಲ್ಲ , ಈ ಮೊದಲು ಇಬ್ಬರ ಮಕ್ಕಳಿಗಾಗಿ ನಡೆಸಿದ ಇಂಥದೇ ಪ್ರಯತ್ನಗಳು ಫಲ ನೀಡಿಲ್ಲ ಎಂದು ನಿನಗೆ ನಾನು ಹೇಳಿದೆ , ಆದರೂ ನೀ ಕೇಳಲಿಲ್ಲ " ಎಂದು ವ್ಯಥೆಯಿಂದ ಹೇಳಿದರು. ಆಮೇಲೆ ಮತ್ತಷ್ಟೂ ಪರಿತಪಿಸುತ್ತ ನನಗಂತೂ ಸಾಕಾಗಿ ಹೋಗಿದೆ ಎಂದೂ ಅಸಹಾಯಕತೆ ವ್ಯಕ್ತಪಡಿಸಿದರು. ಅವ್ವನಿಗೂ ಆದ ಆಘಾತದಿಂದಾಗಿ ಅವ್ವ ನಿರುತ್ತರಳಾಗಿದ್ದಳು . ನಾನು ಇದನ್ನು ಕೇಳಿಸಿಕೊಳ್ಳುವ ಮೂಕ ಪ್ರೇಕ್ಷಕನಾಗಿದ್ದೆ.
ಊರಿನ ಜನರಿಂದಲೂ ಈ ಹಿಂದೆ ಮಾಡಿದಂತೆ ಪದೇ ಪದೇ ಸಹಾಯ ಮಾಡಬಹುದೆಂದು ನೀರಿಕ್ಷಿಸುವಂತಿರಲಿಲ್ಲ . ಪುರೋಹಿತ ವೃತ್ತಿ ಮಾಡುತ್ತಿದ್ದ ಅಪ್ಪ , ಸಾಹುಕಾರರ ಮನೆಯಿಂದಲೂ ಯಾವ ಸಹಾಯ ನೀರಿಕ್ಷಿಸುತ್ತಿರಲಿಲ್ಲ . ಏಕೆಂದರೆ , ಅವರು ಕೊಡುತ್ತಿದ್ದ ವಾರದ ೫ ರೂಪಾಯಿ ಸಂಬಳವನ್ನೇ ನಿಯಮಿತವಾಗಿ ಕೊಡುತ್ತಿರಲಿಲ್ಲ. ಅವರ ಮನೆಯ ಪರಿಸ್ಥಿತಿಯೂ ಸರಿಯಿರಲಿಲ್ಲ. ಮನೆಯಲ್ಲಿನ ಭಿನ್ನಾಭಿಪ್ರಾಯ , ಆದಾಯದ ಕೊರತೆ ಇತ್ಯಾದಿ ಕಾರಣಗಳೂ ಅದಕ್ಕಿದ್ದವು. ಇದರ ಜೊತೆಗೆ ಪುರೋಹಿತರ ಅವಶ್ಯಕತೆಯೂ ಅವರಿಗೆ ಹಿಂದಿನಂತಿರಲಿಲ್ಲ . ಅವರು ಸರಿಯಾಗಿ ಹಣ ಕೊಡದ ಕಾರಣಕ್ಕೆ ಬೇಸತ್ತಿದ್ದ ಅಪ್ಪ ಹಣ ತರಲು ಅಪ್ಪ ನನ್ನನ್ನು ಅವರ ಮನೆಗೆ ಕಳುಸುತ್ತಿದ್ದ. ನಾನೂ ಹಣ ಕೇಳಿ ಪಡೆಯುವಲ್ಲಿ ಅನೇಕ ಸಲ ವಿಫಲನಾಗಿದ್ದೆ.
ನಂತರ ಒಂದೆರಡು ತಿಂಗಳು ಚರ್ಚೆ , ಜಗಳ , ಅಸಮಾಧಾನದ ನಂತರ ನಿರಾಸೆಯಿಂದ ಅಪ್ಪ , " ಈ ಊರು ನನಗೆ ಸಾಕಾಗಿದೆ , ಇರಲು ಮನೆಯಿಲ್ಲ , ಆದಾಯವಿಲ್ಲ . ಜೀವನ ನಡೆಸುವುದೂ ಕಷ್ಟವಾಗಿದೆ ಇನ್ನು ಈ ಊರು ಸಾಕು , ಮಂಗಳೂರಿಗೆ ಹೋಗೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ. ಮಂಗಳೂರು , ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಊರು. ಟಿ ಬಿ ಕಾಯಿಲೆಯಿಂದ ಬಸವಳಿದಿದ್ದ ಅಪ್ಪ ತಾನು ಸಾಯುವ ಕಾಲದಲ್ಲಾದರೂ ತನ್ನೂರಿನ ತನ್ನ ಸ್ವಂತ ಮನೆಯಲ್ಲಿ ಸಾಯ ಬಯಸುತ್ತಿದ್ದ. ಆ ಊರಿನಲ್ಲಿ ನಮ್ಮ ತಾತನಿಂದ ಬಂದ ಸ್ವಲ್ಪ ಮಳೆಯಾಶ್ರಿತ ಜಮೀನಿತ್ತು. ೩೦ x ೩೫ ಅಳತೆಯ ಜಾಗದಲ್ಲಿ ನಮ್ಮ ಅಣ್ಣನವರು ಕಟ್ಟಿಸಿದ್ದ ಒಂದು ಮಣ್ಣಿನ ಮನೆಯೂ ಇತ್ತು.
ಮಕ್ಕಳಾದ ನಮಗೆ ಅಂದು , ಇಂದು , ಹಾಗೂ ಮುಂದೆಯೂ ನಮ್ಮ ಊರೆಂದರೆ ಗೊಂಡಬಾಳು ಮಾತ್ರ. ಆದರೆ ಅಪ್ಪನಿಗೆ ಆಗ ಮಂಗಳೂರಿನ ನೆನಪಾಯಿತು . ಅದೇಕೋ ?
ಆದರೆ ಜಮೀನು , ಮನೆ ಇದ್ದುದರಿಂದ ಮಂಗಳೂರು ತಮ್ಮ ಊರೆಂದು ಭಾವಿಸಿದ್ದಂತೆ ಕಾಣುತ್ತದೆ. ಅಲ್ಲದೆ ಬಾಲ್ಯವನ್ನು ಅಲ್ಲಿ ಕಳೆದಿದ್ದೂ ಇನ್ನೊಂದು ಕಾರಣವಿರಬಹುದು. ಅಥವಾ ಅಸಹಾಯಕತೆಯಿಂದ , ಮನೆಯಿರುವ , ಯಾವದೇ ಉತ್ಪನ್ನವಿರದಿದ್ದರೂ , ಹೇಳಿಕೊಳ್ಳಲಾದರೂ ಜಮೀನಿರುವ ಊರು ಮೇಲೆಂದೆನಿಸಿತ್ತೋ. ಟಿ ಬಿ ಕಾರಣದಿಂದಾಗಿ ದೈಹಿಕವಾಗಿ ಬಳಲಿದ್ದ ಅಪ್ಪ ಮಾನಸಿಕವಾಗಿಯೂ ಹತಾಶರಾಗಿದ್ದರು. ಈ ಎಲ್ಲ ಕಾರಣಗಳಿಂದ ಅಪ್ಪ ಮಂಗಳೂರಿಗೆ ಹೋಗೋಣ ಎಂದು ಪದೇ ಪದೇ ಹೇಳುತ್ತಿದ್ದರು.
ಮಂಗಳೂರು ಈಗಿನ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಒಂದು ಗ್ರಾಮವೆಂದು ಈಗಾಗಲೇ ಹೇಳಿದ್ದೇನೆ. ಅದು ಗೊಂಡಬಾಳಿನಿಂದ ಅಂದಾಜು ೩೫ ಕಿ ಮೀ ದೂರದಲ್ಲಿದೆ . ಅಲ್ಲಿ ಹೈಸ್ಕೂಲ್ ಇತ್ತು. ಅಲ್ಲಿ ನನ್ನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂಬ ಕಾರಣವೂ ಸೇರಿ ೧೯೭೧ರಲ್ಲಿ ಭಾರವಾದ ಮನಸ್ಸಿನಿಂದ ನಾನು ಹುಟ್ಟಿ ಬೆಳೆದ , ಆಟವಾಡಿ ಖುಷಿಪಟ್ಟ , ಆಗಲೇ ಜನ ಪರಿಚಯವಿದ್ದ ಊರು ಬಿಟ್ಟು ಹೋಗಬೇಕಾಯಿತು. ಬದುಕು ಕಟ್ಟಿಕೊಟ್ಟ ಆಸರೆ ನೀಡಿದ್ದ ಊರು ಹಾಗೂ ಜನರನ್ನು ಬಿಟ್ಟು ಹೋಗಬೇಕಾದ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು.
ನಮ್ಮಲ್ಲಿ ಹೆಚ್ಚಿನ ಸಾಮಾನು ಸರಂಜಾಮುಗಳೇನೂ ಇರಲಿಲ್ಲ. ಈಗಿನಂತೆ ಮಂಚ ಕುರ್ಚಿ , ಟೇಬಲ್ಲುಗಳು ಇರಲಿಲ್ಲ. ಇದ್ದಿದ್ದು ಹಾಸಿಗೆ, ಗುಡಾರಗಳು , ಉಡುವ ಬಟ್ಟೆ , ಅಡುಗೆ ಪಾತ್ರೆಗಳು , ದೇವರ ಸಾಮಾನುಗಳು ಹಾಗೂ ಚಿಕ್ಕ ಚಿಕ್ಕ ಇತರೆ ವಸ್ತುಗಳು. ಒಂದು ಎತ್ತಿನ ಗಾಡಿಯಲ್ಲಿ ಎಲ್ಲ ಸಾಮಾನುಗಳನ್ನು ಸಾಗಿಸಿದೆವು. ನನಗೂ ನನ್ನ ಸಹಪಾಠಿಗಳನ್ನು ಬಿಟ್ಟು ಹೋಗುವಾಗ ಮನಸ್ಸು ಭಾರವಾಗಿತ್ತು. ಆದರೇನು ಅದು ಅನಿವಾರ್ಯವಾಗಿತ್ತು. !
ಭಾಗ - ೨ - ಮಂಗಳೂರು ವಾಸ - ಹೈಸ್ಕೂಲ್ ವಿದ್ಯಾಭ್ಯಾಸ
ಭಾಗ - ೩ - ಚಿತ್ರದುರ್ಗದತ್ತ ಪಯಣ
ಭಾಗ -೪ ಮಾಸ್ಕೊ ಯಾತ್ರೆ - ವಿದ್ಯಾಭಾಸ , ಅನುಭವ , ಕಲಿಕೆ
ಭಾಗ - ೫ ಬೆಂಗಳೂರಿನಲ್ಲಿ ವೃತ್ತಿಜೀವನ
Comments
Post a Comment